
ನಾ ಗೆಲ್ಲುವೆ
ನನ್ನಾಣೆಗೂ ನಾ ಗೆಲ್ಲುವೆ
ಸೋತರೇನಂತೆ ಈ ದಿನ
ಮುಂದೊಂದು ದಿನ ಗೆದ್ದೇ ತೀರುವೆ ।।
ಕನಸುಗಳು ಕೈ ಕೊಟ್ಟರೇನಂತೆ
ಮನಸಿಗೆ ನೋವಾದರೇನಂತೆ
ಸೋತರೇನಂತೆ ಈ ದಿನ
ನನ್ನ ಬದುಕು ಎಲ್ಲರ ಬದುಕಂತೆ ।।
ಸೋಲಿಲ್ಲದ ಜೀವನ
ಸಾವಿಲ್ಲದ ಮನೆಯಂತೆ
ಸೋತರೇನಂತೆ ಈ ದಿನ
ಸೋಲೆಂಬುದು ಸಾಮಾನ್ಯವಂತೆ।।
ಗೆಲುವಿಗೊಂದೆ ನೆಲೆಯಂತೆ
ಸೋಲಿಗಿಲ್ಲಿ ಶೂನ್ಯ ಬೆಲೆಯಂತೆ
ಸೋತರೇನಂತೆ ಈ ದಿನ
ಸೋತು ಗೆಲ್ಲುವುದು ಒಂದು ಕಲೆಯಂತೆ।।
ಗೆದ್ದವನಿಗೆ ಬಂಗಾರದ ತೊಟ್ಟಿಲಂತೆ
ಸೋತವನ ತೆಕ್ಕೆಗೆ ತಾಮ್ರದ ಬಟ್ಟಲಂತೆ
ಸೋತರೇನಂತೆ ಈ ದಿನ
ಸೋಲೇ ಗೆಲುವಿನ ಮೊದಲ ಮೆಟ್ಟಿಲಂತೆ ।।
ಕೊನೆಗೊಂದು ಮಾತು ಹೇಳುವೆ
ನನ್ನಾಣೆಗೂ ನಾ ಗೆದ್ದೇ ಗೆಲ್ಲುವೆ
ಆದರೆ ಗೆಲ್ಲಲಿ ಸೋಲಲಿ ಮುಂದೊಂದು ದಿನ
ನನ್ನ ಬದುಕು ಕೂಡ ಉಳಿದವರು ಕಂಡಂತೆ ।।
--
ಗುರುರಾಜ