ಪುಟಗಳು

ಶುಕ್ರವಾರ, ಜುಲೈ 6, 2012

ಒಂದು ಸಣ್ಣ ಕಥೆ-೩

ಬಿಸಿಲಿನ ಬೇಗೆಯಲ್ಲಿ ಕಲ್ಲು ಹೊಡೆಯುತ್ತಿದ್ದವನ
ಬೆವರು ಕಲ್ಲಿನ ಮೇಲೆ ಬಿದ್ದಾಗ
ಕಲ್ಲು ಅವನ ಕಷ್ಟ ನೋಡಿ ಕಣ್ಣೀರಿಟ್ಟಿತೋ
ಅಥವಾ
ನೋವು ತಾಳಲಾರದೆ ಕಣ್ಣೀರಿಟ್ಟಿತೋ
ಎಂಬ ಗೊಂದಲ ಕಾಡಿತ್ತು ಅವನಲ್ಲಿ
--
ಗುರುರಾಜ 

ಗುರುವಾರ, ಜುಲೈ 5, 2012

ಒಂದು ಸಣ್ಣ ಕಥೆ-೨

"ನಿನ್ನ ಮುಖ ತೋರಿಸಬೇಡ" ಎಂದು ಹೇಳಿ ಹೊರಟು ಹೋದ
ಗೆಳತಿಯನ್ನು ನೆನೆಯುತ ದಾರಿಯಲ್ಲಿ ಹೆಣವಾದವನ ಗುರಿತಿಸಲು
ಪೊಲೀಸರು ಅವಳನ್ನೇ ಕರೆಸಿದರು.
--
ಗುರುರಾಜ 

ಮಂಗಳವಾರ, ಜುಲೈ 3, 2012

ಒಂದು ಸಣ್ಣ ಕಥೆ



ನಲ್ಲೆಯ ಕೈ ಹಿಡಿದು ಲೋಕವನೆ ಮರೆತು
ಚಲಿಸುತ್ತಿದ್ದವನ ಕಾಲೆಡವಿ ಬಿದ್ದಾಗ
ನೆನೆಪಾದವಳು ಮಾತ್ರ ಅವನ
ತಾಯಿ!!
--ಗುರುರಾಜ

ಸೋಮವಾರ, ಜುಲೈ 2, 2012

ತಿರಸ್ಕಾರ


ಒಲ್ಲದ ಮನಸ್ಸು , ನಿಲ್ಲದ ವಯಸ್ಸು
ಕನಸಿನ ಬೆಂಬಲ ,ಮನೆಯವರ ಹಂಬಲ 
ಎಲ್ಲವೂ ಕೂಡಿ ಕರೆದೊಯ್ದವು ಅವಳೂರಿಗೆ
ನನ್ನ  ಮಡದಿಯಾಗ ಬೇಕಿದ್ದವಳ ತವರೂರಿಗೆ||

ತಳಿರು ತೋರಣ ರಂಗೋಲಿಗಳ ಸ್ವಾಗತ 
ಮಕ್ಕಳು ಕುಣಿದವು ಅಕ್ಕನ ಗಂಡ ಬಂದನೆನ್ನುತ 
ಅವಳ ಮನೆಯಲ್ಲಿ ಮುಗಿಲು ಮುಟ್ಟಿತ್ತು ಸಂಭ್ರಮ 
ನನ್ನ ಮೂಗಿಗೆ ಬಡಿದಿತ್ತು ಕೇಸರಿಬಾತಿನ ಘಮ ಘಮ||

ಎದೆಯಲ್ಲಿ ಅವಳ ಕಲ್ಪನೆ ನಾಲಿಗೆಗೋ ಉಪ್ಪಿಟ್ಟಿನ ಯೋಚನೆ 
ಗೆಜ್ಜೆಯ ಮೇಳದೊಂದಿಗೆ ಅವಳು ಬಂದಳು ಮೆಲ್ಲನೆ 
ಕಂಡೊಡನೆಯೆ ಮೈಯೆಲ್ಲಾ ವಿದ್ಯುತ್ ಹರಿದಾಟ 
ಎಂದಿಗೂ ಮರೆಯಲಾರೆ ಅವಳ ಆ ವಾರೆನೋಟ ||

ನಮ್ಮಿಬ್ಬರನು ಕಳುಹಿಸಿ ಕೊಟ್ಟರು ಮಹಡಿಯ ಮೇಲೆ 
ಹಂಚಿಕೊಳ್ಳಲು ತಂತಮ್ಮ ಮನಸಿನ ಓಲೆ 
ತೆರೆದಿಟ್ಟಳು ಬಾಳ ಪುಟವ ಆ ಚೆಲುವೆ 
ಕಂಬನಿಯೊಂದಿಗೆ ಹೇಳಿದಳು ಇಷ್ಟವಿಲ್ಲ ನನಗೀ ಮದುವೆ||

ಕಾರಣ ಕೇಳಿದಾಗ ಕೊಟ್ಟಳವಳು ಉತ್ತರ 
ನೀವು ಬೇಡುವ ಹೃದಯವೇ ಇಲ್ಲ ನನ್ನ ಹತ್ತಿರ 
ನನ್ನ ಹೃದಯ ಕೋಟೆಗೆ ಬೇರೊಬ್ಬನು ಹಾಕಿರುವನು   ಕನ್ನ
ಅವನ ಬಿಟ್ಟು ಬಾಳಲಾರೆ ಕ್ಷಮಿಸಿ ಬಿಡಿ ನನ್ನ ||

ಆ ಕ್ಷಣದಲ್ಲಿ ನೆನಪಾದವಳು ನನ್ನ ಮೊದಲ ಪ್ರೀತಿ 
ಹಣದ ಹಿಂದೆ ಹೋದವಳು ಇರಬಾರದಿತ್ತ ಇವಳ ರೀತಿ 
ಚೆನ್ನಾಗಿ ಬಾಳಿ ಎಂದು ಹರಸಿ ಹೇಳಿದೆ ಅವಳಿಗೆ ನಮಸ್ಕಾರ 
ಮನಸ್ಸು ಕೂಗಿ ಹೇಳಿತು ಯೋಚಿಸದಿರು ಅಣ್ಣ ಹೊಸತಲ್ಲ ನಿನಗೀ ತಿರಸ್ಕಾರ||

--ಗುರುರಾಜ 
(Techmahindra ಕಾವ್ಯ ಸುಧೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ಕವಿತೆ)