ಪುಟಗಳು

ಮಂಗಳವಾರ, ಡಿಸೆಂಬರ್ 18, 2012

ಸಾಫ್ಟ್ ವೇರ್ ಸುಂದರಿ


ವಾರಾಂತ್ಯವೆಂಬ ಮಾಯೆಯು ಕಳೆದು ಸೋಮವಾರ ಬಂದಿತು
ಮತ್ತದೇ ಕೆಲಸಕೆ ಹೋಗುವ ಸಮಯವೂ ಆಯಿತು 
ಕಚೇರಿಗೆ ತೆರಳಲು ಕಾಯುತ ಬಸ್ ನಿಲ್ದಾಣದಲಿ 
ಧೂಳು ಕುಡಿಯುತ ನಿಂತೆ ಆ ಸುಡು ಬಿಸಿಲಿನಲಿ।।

ತೆವಳುತ ಬಳುಕುತ ಕೊನಗೂ ಬಂತು ಅಲ್ಲಿಗೆ
ಕಪ್ಪು ರಸ್ತೆಯ ಮೇಲೆ ವೋಲ್ವೋ ಎಂಬ ಕೆಂಪು ಮಲ್ಲಿಗೆ
ಹತ್ತಲು ತಂಪು ಗಾಳಿಯ ಆಹ್ವಾನ
ಅಲ್ಲೇ ಬರೆದಿತ್ತು  ಸುಖಕರವಾಗಿರಲಿ ನಿಮ್ಮ ಪ್ರಯಾಣ।।

ಹಾಗೆ ಕುಳಿತು ಅತ್ತಿತ್ತ  ಕಣ್ಣಾಡಿಸಲು ಕಂಡಲೊಬ್ಬಳು ಸುಂದರಿ
ಆ ಮೇನಕೆಯ ಭೂಲೋಕದ ಸೋದರಿ
ಅರ್ಧ ಮುಖವ ಮುಚ್ಚಿದ ಕನ್ನಡಕದ ಗಾಜು
ಇನ್ನರ್ಧ ಮುಖವ ಮುಚ್ಚಲು ಆ ಮುಂಗುರುಳ ಮೋಜು।।

ತುಟಿಯಂತು ಹಸಿ ರಕ್ತದ ಬಣ್ಣ
ಹುಬ್ಬೋ ಬೆಂಕಿ ಕಡ್ಡಿಗಿಂತಲೂ  ಸಣ್ಣ
ಏನೆಂದು ವರ್ಣಿಸಲಿ ಅವಳ ಆ  ವದನ
ಅಲಂಕಾರ ಮತ್ತು ಯವ್ವನದ ನಡುವಿನ  ಕದನ।।

ಕೈಯಲ್ಲಿ ಹಿಡಿದು ಗಣಕದ ತುಂಡು
ಕಿವಿಯನು  ಮುಚ್ಚಿದ ತಾಂತ್ರಿಕತೆಯ ಚೆಂಡು
ಅವಳಿಗೂ ಕೇಳಿಸದ ಸದ್ದಿನಲ್ಲಿ ಪಿಸು ಪಿಸು ಮಾತು
ಅದೆಷ್ಟು ಚುರುಕೋ ಆ ನಲ್ಲನ ಕಿವಿಯ ತೂತು।।

ಕೈ ಮುಗಿಯುತ ಅವಳ ಆ ಅವತಾರಕೆ
ಬೇಡುತ ದೇವರಲಿ ಅವಳ ನಲ್ಲನ ಜೀವನಕೆ
ಮುಗಿಸಿದೆ ನನ್ನ ಅಂದಿನ ಪ್ರಯಾಣ
ಮುಗಿಸುತ ಸಾಫ್ಟ್ ವೇರ್ ಸುಂದರಿಯ ಪುರಾಣ।।

--ಗುರುರಾಜ 

ಶನಿವಾರ, ಡಿಸೆಂಬರ್ 15, 2012

ಹೇಗಿದ್ದೀರ ನಮಸ್ಕಾರ

ಹೀಗೆಯೇ ಮೊನ್ನೆ ಸ್ನೇಹಿತನ ಮದುವೆ
ಹಲವು ದಿನಗಳ ನಂತರ ಸ್ನೇಹಿತರ ನಡುವೆ 
ಕಳೆದೆನು ಕಾಲವ ಕ್ಷಣಗಳ ಪೋಣಿಸುತ 
ಬಿರುಸಿನ ಬದುಕಲಿ ಮನವನು ತಣಿಸುತ ।।

ಮರೆಯದಾ  ಮುಖಗಳು ಒಂದೊಂದೇ ಎದುರಿರಲು 
ಹೃದಯದಾ  ಮನೆಯಲಿ ನೂರೆಂಟು ಮಾತಿರಲು 
ನಾಲಿಗೆಗೆ ಮಾತ್ರ ಹುಸಿ ಅಹಂಕಾರ 
ಅವರನು  ಕಂಡಾಗ  ಹೊರಟ ಎರಡೇ  ಮಾತು "ಹೇಗಿದ್ದೀರ ನಮಸ್ಕಾರ"।।

ಮೂಲೆಯಲಿ ನಿಂತು ಗಮನಿಸಿದೆ ಎಲ್ಲರನು 
ಎಲ್ಲರ ಮೊಗದಲ್ಲಿನ ನೂರು ವ್ಯತ್ಯಾಸವನು
ಹೆಗಲೇರಿದೆ ಅದು ಎಷ್ಟೋ ಜವಾಬ್ದಾರಿ
ಪಯಣ ಸಾಗಿದೆ ಬದಲಾವಣೆಯ ಬೆನ್ನೇರಿ ।।

ಅವನಪ್ಪಣೆಯಂತೆ  ಸಾಗಿಹುದು ಜೀವನ
ಅವನ ಇಚ್ಛೆಯಂತೆ  ಬಂದಿಹುದು ಈ ದಿನ
ಮಗ್ನರಾಗಿಹರು ಎಲ್ಲರೂ ತಮ್ಮದೇ ಸಾಧನೆಯಲಿ
ಅವನಲಿ ಬೇಡಿಕೆ ಇಷ್ಟೇ  ಹೀಗೊಮ್ಮೆ ಸ್ನೇಹಿತರ ಸಮ್ಮಿಲನವಾಗುತಿರಲಿ।।

--ಗುರುರಾಜ