ಪುಟಗಳು

ಶುಕ್ರವಾರ, ಜೂನ್ 7, 2019

ಗಾಂಧಿ

Image result for DRESSES LIKE GANDHI
ಏಕೆ ನೀವು ಹಾಗೆ ನೋಡುವಿರಿ
ನೀವು ಎಣಸಿದಂತೆ ಏನೂ  ಇಲ್ಲ
ನಾ ಅವನಂತೆ ಕಾಣುವ ಪಾತ್ರಧಾರಿ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।

ಕಾಲ ಕಳೆದಂತೆ ಮಾಸಿಹುದು
ಆ ತಾತನ ನೆನಪು, ಇದು ಸುಳ್ಳಲ್ಲ
ಅವನ ನೆನಪಿಸುವುದೇ ನನ್ನ ಕಾರ್ಯ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।

ಸತ್ಯ ನುಡಿದ ಸಂತನಾತ 
ಶಾಂತಿ ಸಾರಿದ ಛಲದಂಕ ಮಲ್ಲ
ಆತನ ತತ್ವಗಳನ್ನು ಸಾರುತಿಹೆ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।

ಅಹಿಂಸೆ ಶಾಂತಿಯ  ಪ್ರತೀಕನಾತ
ಆತನ ಸಮನಾರು ಇನ್ನು ಹುಟ್ಟಿಲ್ಲ
ಆತನ ವೇಷದಲಿ ಜೀವನ ನಡೆಸುತಿಹೆ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।
---
ಗುರುರಾಜ್ ಎಂ ಜೆ

ಭಾನುವಾರ, ಜೂನ್ 2, 2019

ಸರೋಜಮ್ಮನ ಖುಷಿ

ಸರೋಜಮ್ಮನ ಖುಷಿ
--------------------------
Image result for happy indian village  lady cartoon
                 Image courtesy : Shutterstock

ಬಾಗಿಲ ಮುಂದೆ ಕಸಗುಡಿಸಿ
ಒಣಗಿದ್ದ ತುಳಸಿಗೆ ನೀರುಣಿಸಿ
ಹೊಸಿಲಿಗೆ ರಂಗೋಲಿಯ ಸಿಂಪಡಿಸಿ
ಖುಷಿಯಲ್ಲಿದ್ದರು ಸರೋಜಮ್ಮ ।।

ಚಕ್ಕುಲಿಯನು ಎಣ್ಣೆಯಲಿ ಇಳಿಸುತ
ಗರಿ ಲಾಡನ್ನು ಕೈಯಲ್ಲಿ ಕಟ್ಟುತ
ತುಪ್ಪ ಮಾಡಲು ಬೆಣ್ಣೆಯನು ಕಾಯಿಸುತ
ಖುಷಿಯಲ್ಲಿದ್ದರು ಸರೋಜಮ್ಮ ।।

ಭಾವಚಿತ್ರಗಳ ಧೂಳನ್ನು ಒರೆಸಿ
ಮೇಜಿನ ಮೇಲಿನ ಬಟ್ಟೆಯನ್ನು ಬದಲಿಸಿ
ಬೇಡದ ವಸ್ತುಗಳ ಅಟ್ಟದಲ್ಲಿ ಕೂರಿಸಿ
ಖುಷಿಯಲ್ಲಿದ್ದರು ಸರೋಜಮ್ಮ ।।

ದೂರದಲಿ ಅಲ್ಲೆಲ್ಲೋ ಗಾಡಿಯ ಶಬ್ದ ಕೇಳಲು
ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ
ಬಾಗಿಲಿನಿ ಬಳಿಗೋಡಿ ನಿಂತು
ಖುಷಿಯಲ್ಲಿದ್ದರು ಸರೋಜಮ್ಮ ।।

ಕೊನೆಗೂ ಆಷಾಡ ಬಂದಿತ್ತಲ್ಲ
ನಮ್ಮೆನೆಯ ನಂದಾದೀಪ ಮತ್ತೆ ಬರುವಳಲ್ಲ
ಒಂದಷ್ಟು ದಿನವಾದರೂ ಮತ್ತೆ ಜೊತೆಗಿರುವಳಲ್ಲ
ಎಂದು ಖುಷಿಯಾಗಿದ್ದರು ಸರೋಜಮ್ಮ ।।

-----
ಗುರುರಾಜ್ ಎಂ ಜೆ
(ಮೊದಲು ಪ್ರಕಟ ಗೊಂಡಿದ್ದು ಟಾಕ್ ಆಫ್ ದಿ ಟೌನ್ ಫೇಸ್ಬುಕ್/ಟ್ವಿಟ್ಟರ್ ನಲ್ಲಿ)