ಪುಟಗಳು

ಮಂಗಳವಾರ, ಡಿಸೆಂಬರ್ 18, 2012

ಸಾಫ್ಟ್ ವೇರ್ ಸುಂದರಿ


ವಾರಾಂತ್ಯವೆಂಬ ಮಾಯೆಯು ಕಳೆದು ಸೋಮವಾರ ಬಂದಿತು
ಮತ್ತದೇ ಕೆಲಸಕೆ ಹೋಗುವ ಸಮಯವೂ ಆಯಿತು 
ಕಚೇರಿಗೆ ತೆರಳಲು ಕಾಯುತ ಬಸ್ ನಿಲ್ದಾಣದಲಿ 
ಧೂಳು ಕುಡಿಯುತ ನಿಂತೆ ಆ ಸುಡು ಬಿಸಿಲಿನಲಿ।।

ತೆವಳುತ ಬಳುಕುತ ಕೊನಗೂ ಬಂತು ಅಲ್ಲಿಗೆ
ಕಪ್ಪು ರಸ್ತೆಯ ಮೇಲೆ ವೋಲ್ವೋ ಎಂಬ ಕೆಂಪು ಮಲ್ಲಿಗೆ
ಹತ್ತಲು ತಂಪು ಗಾಳಿಯ ಆಹ್ವಾನ
ಅಲ್ಲೇ ಬರೆದಿತ್ತು  ಸುಖಕರವಾಗಿರಲಿ ನಿಮ್ಮ ಪ್ರಯಾಣ।।

ಹಾಗೆ ಕುಳಿತು ಅತ್ತಿತ್ತ  ಕಣ್ಣಾಡಿಸಲು ಕಂಡಲೊಬ್ಬಳು ಸುಂದರಿ
ಆ ಮೇನಕೆಯ ಭೂಲೋಕದ ಸೋದರಿ
ಅರ್ಧ ಮುಖವ ಮುಚ್ಚಿದ ಕನ್ನಡಕದ ಗಾಜು
ಇನ್ನರ್ಧ ಮುಖವ ಮುಚ್ಚಲು ಆ ಮುಂಗುರುಳ ಮೋಜು।।

ತುಟಿಯಂತು ಹಸಿ ರಕ್ತದ ಬಣ್ಣ
ಹುಬ್ಬೋ ಬೆಂಕಿ ಕಡ್ಡಿಗಿಂತಲೂ  ಸಣ್ಣ
ಏನೆಂದು ವರ್ಣಿಸಲಿ ಅವಳ ಆ  ವದನ
ಅಲಂಕಾರ ಮತ್ತು ಯವ್ವನದ ನಡುವಿನ  ಕದನ।।

ಕೈಯಲ್ಲಿ ಹಿಡಿದು ಗಣಕದ ತುಂಡು
ಕಿವಿಯನು  ಮುಚ್ಚಿದ ತಾಂತ್ರಿಕತೆಯ ಚೆಂಡು
ಅವಳಿಗೂ ಕೇಳಿಸದ ಸದ್ದಿನಲ್ಲಿ ಪಿಸು ಪಿಸು ಮಾತು
ಅದೆಷ್ಟು ಚುರುಕೋ ಆ ನಲ್ಲನ ಕಿವಿಯ ತೂತು।।

ಕೈ ಮುಗಿಯುತ ಅವಳ ಆ ಅವತಾರಕೆ
ಬೇಡುತ ದೇವರಲಿ ಅವಳ ನಲ್ಲನ ಜೀವನಕೆ
ಮುಗಿಸಿದೆ ನನ್ನ ಅಂದಿನ ಪ್ರಯಾಣ
ಮುಗಿಸುತ ಸಾಫ್ಟ್ ವೇರ್ ಸುಂದರಿಯ ಪುರಾಣ।।

--ಗುರುರಾಜ 

ಶನಿವಾರ, ಡಿಸೆಂಬರ್ 15, 2012

ಹೇಗಿದ್ದೀರ ನಮಸ್ಕಾರ

ಹೀಗೆಯೇ ಮೊನ್ನೆ ಸ್ನೇಹಿತನ ಮದುವೆ
ಹಲವು ದಿನಗಳ ನಂತರ ಸ್ನೇಹಿತರ ನಡುವೆ 
ಕಳೆದೆನು ಕಾಲವ ಕ್ಷಣಗಳ ಪೋಣಿಸುತ 
ಬಿರುಸಿನ ಬದುಕಲಿ ಮನವನು ತಣಿಸುತ ।।

ಮರೆಯದಾ  ಮುಖಗಳು ಒಂದೊಂದೇ ಎದುರಿರಲು 
ಹೃದಯದಾ  ಮನೆಯಲಿ ನೂರೆಂಟು ಮಾತಿರಲು 
ನಾಲಿಗೆಗೆ ಮಾತ್ರ ಹುಸಿ ಅಹಂಕಾರ 
ಅವರನು  ಕಂಡಾಗ  ಹೊರಟ ಎರಡೇ  ಮಾತು "ಹೇಗಿದ್ದೀರ ನಮಸ್ಕಾರ"।।

ಮೂಲೆಯಲಿ ನಿಂತು ಗಮನಿಸಿದೆ ಎಲ್ಲರನು 
ಎಲ್ಲರ ಮೊಗದಲ್ಲಿನ ನೂರು ವ್ಯತ್ಯಾಸವನು
ಹೆಗಲೇರಿದೆ ಅದು ಎಷ್ಟೋ ಜವಾಬ್ದಾರಿ
ಪಯಣ ಸಾಗಿದೆ ಬದಲಾವಣೆಯ ಬೆನ್ನೇರಿ ।।

ಅವನಪ್ಪಣೆಯಂತೆ  ಸಾಗಿಹುದು ಜೀವನ
ಅವನ ಇಚ್ಛೆಯಂತೆ  ಬಂದಿಹುದು ಈ ದಿನ
ಮಗ್ನರಾಗಿಹರು ಎಲ್ಲರೂ ತಮ್ಮದೇ ಸಾಧನೆಯಲಿ
ಅವನಲಿ ಬೇಡಿಕೆ ಇಷ್ಟೇ  ಹೀಗೊಮ್ಮೆ ಸ್ನೇಹಿತರ ಸಮ್ಮಿಲನವಾಗುತಿರಲಿ।।

--ಗುರುರಾಜ 

ಗುರುವಾರ, ಅಕ್ಟೋಬರ್ 18, 2012

ಕಿವಿಯ ಮೇಲೆ ಹೂ

ತೆರುವಾದ ಹೃದಯದಲಿ ನಿನಗೀಗ ಜಾಗವಿದೆ
ಪ್ರೀತಿಯ ಈ ಸಂಗಮಕೆ ಮನಸೀಗ ಬೇಡುತಿದೆ
ಬರುವೆಯ ನೀ ಇಲ್ಲ ಎನದೆ 
ನನ್ನ ಕಿವಿಯ ಮೇಲೆ ಹೂ ಇಡದೆ||

ಆನಂದ ಭಾಷ್ಪವು ಜಾರಲು ಕಾಯುತಿದೆ 
ಹೃದಯದ ಬಡಿತವು ಅಂಕೆಯ ಮೀರುತಿದೆ  
ಬರುವೆಯ ನೀ ತಡ ಮಾಡದೆ 
ನನ್ನ ಕಿವಿಯ ಮೇಲೆ ಹೂ ಇಡದೆ||

ಉಸಿರೆಕೋ ಇಂದು ಪ್ರೀತಿಯ ರಾಗವ ಹಾಡುತಿದೆ 
ನರನಾಡಿಗಳೆಲ್ಲ ಅದರ ಸಂಗಡ ತಾಳವ ಹಾಕುತಿದೆ 
ಬರುವೆಯ ನೀ ಹಿಂಜರಿಯದೆ 
ನನ್ನ ಕಿವಿಯ ಮೇಲೆ ಹೂ ಇಡದೆ||

ಮನಸೇಕೋ  ಇಂದು ಖಾಲಿಯಾದಂತಿದೆ 
ನನ್ನ ಕಲ್ಪನೆಯೂ ಕೊನೆ ಹಂತದಲ್ಲಿದೆ 
ಬರುವೆಯ ನೀ ಹಿಂದೆ ಮುಂದೆ ನೋಡದೆ 
ನನ್ನ ಕಿವಿಯ ಮೇಲೆ ಹೂ ಇಡದೆ||
--
ಗುರುರಾಜ 

ಹಾಗೆ ಸುಮ್ಮನೆ

ಸಂಜೆಯ ತಂಪಲಿ
ಮಹಡಿಯ ಮೇಲ್ಗಡೆ
ಸುಮ್ಮನೆ ಕುಳಿತಾಗ
ಹಾಗೆ ಸುಮ್ಮನೆ ಗೀಚಿದ ಪದ್ಯ||

ಗಡಿಬಿಡಿಯ ಬದುಕಲಿ
ಎಡಬಿಡದ ಕನಸಲಿ
ಅವರಿವರ ನೆನಪಲಿ
ಹಾಗೆ ಸುಮ್ಮನೆ ಗೀಚಿದ ಪದ್ಯ||

ಬಾಲ್ಯದ ತುಂಟತನ
ಹರೆಯದ ಒಂಟಿತನ
ಕಾದಿರುವ ಮುದಿತನವ ನೆನೆಯುತ
ಹಾಗೆ ಸುಮ್ಮನೆ ಗೀಚಿದ ಪದ್ಯ||

ನಿನ್ನೆಯ ಜ್ವರದಲಿ
ನಾಳಿನ ಅಬ್ಬರದಲಿ
ಇಂದಿನ ದಿನವನು ಜರೆಯುತ
ಹಾಗೆ ಸುಮ್ಮನೆ ಗೀಚಿದ ಪದ್ಯ||

ಜೀವನದ ಈ ಆಟದಲ್ಲಿ
ನಾನೆಷ್ಟು ಹಾರಾಡಿದರು
ಬೀಳುವುದು ಕೊನೆಗೆ ಮಣ್ಣಿಗೆ ಎಂದು
ಹಾಗೆ ಸುಮ್ಮನೆ ಒಂದು ಸತ್ಯ||
--ಗುರುರಾಜ 

ಸೋಮವಾರ, ಸೆಪ್ಟೆಂಬರ್ 17, 2012

ಸಂಧ್ಯಾ ಕಾಲ




ಮಾಸದ ಆ ನೆನಪು
ಮಾಸಿದ ಕಣ್ಣೊಳಪು 
ಮರೆಯಾದ ಆ ಹುರುಪು 
ಕಳೆದೋದ ಜೀವನವೀಗ ಕರಿ ಬಿಳುಪು||

ಖಾಲಿಯಾದ ಕನಸು 
ಮೂಲೆ ಗುಂಪಾದ ಮನಸ್ಸು 
ಯಾವುದರಲ್ಲೂ ಕಾಣುತ್ತಿಲ್ಲ ಸೊಗಸು 
ಏನು ಮಾಡುವುದು ಇದು ವೈರಾಗ್ಯದ ವಯಸ್ಸು||

ಭಗವಂತನೇ ನೀನೆಷ್ಟು ಕ್ರೂರಿ 
ಹೆತ್ತ ಮಕ್ಕಳೇ ಆಗಿರುವರಲ್ಲ ನನ್ನ ವೈರಿ 
ದಯವಿಟ್ಟು ಕೃಪೆ ತೋರಿ 
ತೋರಿಸು ನಿನ್ನ ಮನೆಯ ದಾರಿ||

ಕಾಣುವ ಆಸೆಯಿಲ್ಲ ನಾಳಿನ ಅರುಣೋದಯ 
ಇಷ್ಟು ಹೇಳಿದರು ಕೇಳದ ಕಿವುಡನಾದೆಯ
ಏನು ಮಾಡಬೇಕು ಹೇಳು ಕರಗಲು ನಿನ್ನ ಹೃದಯ
ಕ್ಷಮಿಸು ದೇವ ತಪ್ಪಿದ್ದರೆ, ಮಕ್ಕಳೇಳುವಂತೆ ನಾನೊಬ್ಬ ಮುದಿಯ||

--
ಗುರುರಾಜ

ಶುಕ್ರವಾರ, ಜುಲೈ 6, 2012

ಒಂದು ಸಣ್ಣ ಕಥೆ-೩

ಬಿಸಿಲಿನ ಬೇಗೆಯಲ್ಲಿ ಕಲ್ಲು ಹೊಡೆಯುತ್ತಿದ್ದವನ
ಬೆವರು ಕಲ್ಲಿನ ಮೇಲೆ ಬಿದ್ದಾಗ
ಕಲ್ಲು ಅವನ ಕಷ್ಟ ನೋಡಿ ಕಣ್ಣೀರಿಟ್ಟಿತೋ
ಅಥವಾ
ನೋವು ತಾಳಲಾರದೆ ಕಣ್ಣೀರಿಟ್ಟಿತೋ
ಎಂಬ ಗೊಂದಲ ಕಾಡಿತ್ತು ಅವನಲ್ಲಿ
--
ಗುರುರಾಜ 

ಗುರುವಾರ, ಜುಲೈ 5, 2012

ಒಂದು ಸಣ್ಣ ಕಥೆ-೨

"ನಿನ್ನ ಮುಖ ತೋರಿಸಬೇಡ" ಎಂದು ಹೇಳಿ ಹೊರಟು ಹೋದ
ಗೆಳತಿಯನ್ನು ನೆನೆಯುತ ದಾರಿಯಲ್ಲಿ ಹೆಣವಾದವನ ಗುರಿತಿಸಲು
ಪೊಲೀಸರು ಅವಳನ್ನೇ ಕರೆಸಿದರು.
--
ಗುರುರಾಜ 

ಮಂಗಳವಾರ, ಜುಲೈ 3, 2012

ಒಂದು ಸಣ್ಣ ಕಥೆ



ನಲ್ಲೆಯ ಕೈ ಹಿಡಿದು ಲೋಕವನೆ ಮರೆತು
ಚಲಿಸುತ್ತಿದ್ದವನ ಕಾಲೆಡವಿ ಬಿದ್ದಾಗ
ನೆನೆಪಾದವಳು ಮಾತ್ರ ಅವನ
ತಾಯಿ!!
--ಗುರುರಾಜ

ಸೋಮವಾರ, ಜುಲೈ 2, 2012

ತಿರಸ್ಕಾರ


ಒಲ್ಲದ ಮನಸ್ಸು , ನಿಲ್ಲದ ವಯಸ್ಸು
ಕನಸಿನ ಬೆಂಬಲ ,ಮನೆಯವರ ಹಂಬಲ 
ಎಲ್ಲವೂ ಕೂಡಿ ಕರೆದೊಯ್ದವು ಅವಳೂರಿಗೆ
ನನ್ನ  ಮಡದಿಯಾಗ ಬೇಕಿದ್ದವಳ ತವರೂರಿಗೆ||

ತಳಿರು ತೋರಣ ರಂಗೋಲಿಗಳ ಸ್ವಾಗತ 
ಮಕ್ಕಳು ಕುಣಿದವು ಅಕ್ಕನ ಗಂಡ ಬಂದನೆನ್ನುತ 
ಅವಳ ಮನೆಯಲ್ಲಿ ಮುಗಿಲು ಮುಟ್ಟಿತ್ತು ಸಂಭ್ರಮ 
ನನ್ನ ಮೂಗಿಗೆ ಬಡಿದಿತ್ತು ಕೇಸರಿಬಾತಿನ ಘಮ ಘಮ||

ಎದೆಯಲ್ಲಿ ಅವಳ ಕಲ್ಪನೆ ನಾಲಿಗೆಗೋ ಉಪ್ಪಿಟ್ಟಿನ ಯೋಚನೆ 
ಗೆಜ್ಜೆಯ ಮೇಳದೊಂದಿಗೆ ಅವಳು ಬಂದಳು ಮೆಲ್ಲನೆ 
ಕಂಡೊಡನೆಯೆ ಮೈಯೆಲ್ಲಾ ವಿದ್ಯುತ್ ಹರಿದಾಟ 
ಎಂದಿಗೂ ಮರೆಯಲಾರೆ ಅವಳ ಆ ವಾರೆನೋಟ ||

ನಮ್ಮಿಬ್ಬರನು ಕಳುಹಿಸಿ ಕೊಟ್ಟರು ಮಹಡಿಯ ಮೇಲೆ 
ಹಂಚಿಕೊಳ್ಳಲು ತಂತಮ್ಮ ಮನಸಿನ ಓಲೆ 
ತೆರೆದಿಟ್ಟಳು ಬಾಳ ಪುಟವ ಆ ಚೆಲುವೆ 
ಕಂಬನಿಯೊಂದಿಗೆ ಹೇಳಿದಳು ಇಷ್ಟವಿಲ್ಲ ನನಗೀ ಮದುವೆ||

ಕಾರಣ ಕೇಳಿದಾಗ ಕೊಟ್ಟಳವಳು ಉತ್ತರ 
ನೀವು ಬೇಡುವ ಹೃದಯವೇ ಇಲ್ಲ ನನ್ನ ಹತ್ತಿರ 
ನನ್ನ ಹೃದಯ ಕೋಟೆಗೆ ಬೇರೊಬ್ಬನು ಹಾಕಿರುವನು   ಕನ್ನ
ಅವನ ಬಿಟ್ಟು ಬಾಳಲಾರೆ ಕ್ಷಮಿಸಿ ಬಿಡಿ ನನ್ನ ||

ಆ ಕ್ಷಣದಲ್ಲಿ ನೆನಪಾದವಳು ನನ್ನ ಮೊದಲ ಪ್ರೀತಿ 
ಹಣದ ಹಿಂದೆ ಹೋದವಳು ಇರಬಾರದಿತ್ತ ಇವಳ ರೀತಿ 
ಚೆನ್ನಾಗಿ ಬಾಳಿ ಎಂದು ಹರಸಿ ಹೇಳಿದೆ ಅವಳಿಗೆ ನಮಸ್ಕಾರ 
ಮನಸ್ಸು ಕೂಗಿ ಹೇಳಿತು ಯೋಚಿಸದಿರು ಅಣ್ಣ ಹೊಸತಲ್ಲ ನಿನಗೀ ತಿರಸ್ಕಾರ||

--ಗುರುರಾಜ 
(Techmahindra ಕಾವ್ಯ ಸುಧೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ಕವಿತೆ)