ಪುಟಗಳು

ಶುಕ್ರವಾರ, ಆಗಸ್ಟ್ 14, 2020

ಆಂಡ್ರಾಯ್ಡ್ ಕುಂಜಪ್ಪ













ಯಾಂತ್ರಿಕತೆಯ ಬದುಕಲ್ಲಿ
ಯಕಶ್ಚಿತ್ ಒಂದು ಯಂತ್ರ ನೀನು
ಆದರೂ ನನ್ನ ನಿನ್ನ ನಡುವೆ
ಅರಿಯದ ಈ ಸಂಬಂಧವೇನು 

ನಿನಗೆ ಭಾವನೆಗಳಿಲ್ಲದಿದ್ದರೂ 
ನನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವೆ
ನಗಬೇಕೆಂದಾಗ ನಗಿಸುವೆ
ಕಲಿಯಬೇಕೆಂದಾಗ ಕಲಿಸುವೆ

ನಮಗೆ ಬದುಕಲು ಬೇಕು
ನಿದ್ದೆ,ಊಟ ಒಂದಷ್ಟು ಬುದ್ಧಿ ಶಕ್ತಿ
ನಿನಗೋ ದಿನಕ್ಕೊಮ್ಮೆ 
ಅಥವಾ ಎರಡು ಬಾರಿ ಒಂದಿಷ್ಟು ವಿದ್ಯುಚ್ಛಕ್ತಿ 

ನೀ ಕ್ಷಣ ಕಾಲ ಮರೆಯಾಗಲು
ನಾನಾಗುವೆ ನಿತ್ರಾಣ
ನನಗರಿವಿರದಂತೆ ಅವಲಂಬಿತವಾಗಿದೆ
ನಿನ್ನ ಮೇಲೆ ನನ್ನ ಬದುಕ ಯಾನ

ಅದೆಷ್ಟೋ ಒಂಟಿ ಮನಗಳಿಗೆ
ನಿನ್ನ ಸಖ್ಯವೆ ನಾಕ
ಜಗವನೆ ಮರೆವರು 
ಬೇಡವೆ ಬೇಡ ಇನ್ಯಾವ ಲೋಕ


ಕಾಲ ಚಕ್ರ ಉರುಳಲು
ಎಲ್ಲರು ಬದಲಾಗಬೇಕಪ್ಪ
ಎಲ್ಲರ ಜೊತೆ ಕೊನೆಗೂಬ್ಬನೆ ಉಳಿವನು
ಅವನೆ ಆಂಡ್ರಾಯ್ಡ್ ಕುಂಜಪ್ಪ...

ಗುರುರಾಜ್ ಎಂ ಜೆ

ಭಾನುವಾರ, ಜನವರಿ 12, 2020

ಅಜ್ಜ

Image result for grandfather sketch

ಹಿಂದೊಮ್ಮೆ ಅಜ್ಜನ ಮನೆಗೆ 
ಬೇಸಿಗೆ ಕಳೆದು
ಮುಂಗಾರು ಕಾಲಿಡುವ ಹೊತ್ತಿಗೆ 
ನಾ ಹೋಗಿದ್ದ ನೆನಪು ।।

ಸಂಜೆ ಅಜ್ಜನೊಂದಿಗೆ ಪೇಟೆಗೆ ಹೋಗಿ 
ರಾತ್ರಿ ಬರುವ ಹೊತ್ತಿಗೆ ಕತ್ತಲಾಗಿ 
ಅಜ್ಜ ಹಿಡಿದ ಟಾರ್ಚಿನ ಬೆಳಕಲ್ಲಿ 
ಬೆಳಕಿನ ಮಹತ್ವ ಅರಿತಿದ್ದ ನೆನಪು।।

ರಾತ್ರಿ ಮಲಗಿದ್ದಾಗ 
ಮುಂಗಾರಿನ ಮೊದಲ ಮಳೆಗೆ ಎಚ್ಚರವಾಗಿ  
ಒಡೆದ ಅಂಚಿನಿಂದ  ನೀರು ತೊಟ್ಟಿಕ್ಕುವಾಗ  
ಅದರಡಿ ಅರ್ಧ ಒಡೆದ  ಸುಣ್ಣದ ಡಬ್ಬಿ  ಇಟ್ಟಿದ್ದ  ನೆನಪು ।।

ಮರುದಿನ ನೆರೆ ಮನೆ ಹುಡುಗನ 
ಜೊತೆ ಸಮುದ್ರಕೆ ಹೋಗುವೆನೆಂದಾಗ 
ಸಮುದ್ರದ ಬದಿ ಹೋಪ್ದು ಬೇಡ 
ಕಡಲ್ಕೊರೆತವಂತೆ ಎಂದು ಅಜ್ಜ ಗದರಿದ ನೆನಪು ।।

ಇಂದು ಸುಮಾರು ಇಪ್ಪತ್ತೈದು ವರ್ಷಗಳ 
ನಂತರ ಅದೇ ಪೇಟೆಗೆ ಹೋಗಿ 
ಮರಳಿ ಬರುವಾಗ ಕಂಡ ಸುತ್ತ ಬೀದಿ ದೀಪಗಳ ನಡುವೆ 
ಕಾಡಿದ್ದು ಆ  ಕಡು ಕತ್ತಲ  ನೆನಪು ।।

ರಾತ್ರಿ ಮಲಗಿದ್ದಾಗ 
ಮತ್ತದೆ ಮುಂಗಾರಿನ ಮಳೆಗೆ ಎಚ್ಚರವಾಗಿ 
ಮೇಲೆ ನೋಡಿದಾಗ ಕಂಡ ತಾರಸಿಯ ಮರೆಯಲ್ಲಿ 
ಕಾಡಿದ್ದು ಒಡೆದ ಅಂಚಿನ ನೆನಪು।।

ಮತ್ತದೆ  ನೆರೆಮನೆಯವನ ಜೊತೆ ಕಡಲೆಡೆಗೆ ಹೊರಟಾಗ 
 ಇದ್ದದ್ದು ಅದೇ ಕಡಲು ಅದೇ ಕಡಲ್ಕೊರೆತ 
ಆದರೆ ಸಮುದ್ರದ ಬದಿ  ಹೋಪ್ದು ಬೇಡ 
ಎಂದ ಗದರುವ  ಅಜ್ಜ ಮಾತ್ರ ಇಂದು ಬರಿ ನೆನಪು ।।

-----
ಗುರುರಾಜ್ ಎಂ ಜೆ