ಪುಟಗಳು

ಸೋಮವಾರ, ನವೆಂಬರ್ 4, 2013

ಬ್ರಹ್ಮಚಾರಿಯ ಗೋಳು

ಬಂದಿತೊಂದು ಶುಕ್ರವಾರ
ಕೈಯಲ್ಲಿ ಏಕೋ ಅರಿಶಿನ ದಾರ 
ನನ್ನ ಕಡೆಯೇ ವಾಲಿತೊಂದು ಕತ್ತು 
ಮರುಕ್ಷಣ ಮೂರು ಗಂಟು ಬಿತ್ತು।।

ಇಷ್ಟು ದಿನ  ನಾನೊಬ್ಬ ಬ್ರಹ್ಮಚಾರಿ
ಆಗಿದ್ದೆ ಬರಿ ಸಂತೋಷದ  ವ್ಯಾಪಾರಿ
ಮನೆಯವರಿಗೆ ಮಾತ್ರ ನಾನು ಒಂಟಿ ಸಲಗ 
ಒತ್ತಾಯದ ಮೇರೆಗೆ ಊದಿಸಿದರು ವಾಲಗ।।

ಕನಸುಗಳ ಮೂಟೆಯೊತ್ತ ಯುವಕ 
ಕಾಣದ ಜಗತ್ತು ನೋಡುವ ತವಕ 
ಕಟ್ಟುವಷ್ಟರಲ್ಲಿ ಸಮಾನ ವಯಸ್ಕರ ಮಂಡಳಿ 
ಅವಳ ಜಾತಕದ ಜೊತೆ ಕೂಡಿತು ನನ್ನ ಕುಂಡಲಿ।।

ತಾಳ ತಪ್ಪಿದ ಹಾಗೆ ನಾಡಿ ಮಿಡಿತ 
ಅಷ್ಟು ಗಟ್ಟಿಯಾಗಿದೆ ಈ ಬಾಸಿಂಗದ ಹಿಡಿತ 
ಒಂದೇ ಪ್ರಶ್ನೆ ಹೀಗಲು ಕಾಡುತ್ತಿರುವುದು ಅದುವೇ 
ಬೇಕಿತ್ತಾ ಹೇಳಿ ನನಗೀ ಮದುವೆ ।।
--
ಗುರುರಾಜ 

ಭಾನುವಾರ, ಅಕ್ಟೋಬರ್ 27, 2013

ಮಳೆ


ಬಾನಂಗಳದಿ ಕಪ್ಪು ಛಾಯೆ 
ಮೋಡಗಳಲ್ಲ ಅದು ಸೃಷ್ಟಿಕರ್ತನ ಮಾಯೆ 
ಸಾಲು ಸಾಲಿನಲಿ ಹಿಂದಿಂದೆ ಒಂದೊಂದು 
ನೂಕು ನುಗ್ಗಾಟ ನಡೆಸಿವೆ  ಬಾನಲಿ ಇಂದು।।

ಬಹು ದೂರದಿಂದ ಸಾಗಿ ಬಂದಂತೆ 
ಯಾಕೋ ತೀರ ಸುಸ್ತಾಗಿ ನಿಂತಂತೆ
ಹೊಂಚು ಹಾಕಿದವು ಎಲ್ಲ ಭುವಿಗಿಳಿಯಲು 
ಒಂದೈದು ಕ್ಷಣ ವಿಶ್ರಾಂತಿ ಪಡೆಯಲು।।

ಅದನು ಕಂಡ  ಭೂ ಮಾತೆ ಕರೆಯುತ ಕೈ ಚಾಚಿ 
ಬಾಚಿ ತಬ್ಬಲು ಬಂತು ಮೋಡವದು ತುಸು ನಾಚಿ
ಹನಿಗಳ ಸರಮಾಲೆ ಭುವಿಯತ್ತ ಧುಮುಕುತಲಿ
ಭೂ ರಮೆಯು ಆನಂದದಿ ನಲಿಯುತ ಕುಣಿಯುತಲಿ।।

ಕ್ಷಣದಲ್ಲೇ ಎಲ್ಲೆಲು ಹಸಿರ ಕ್ರಾಂತಿ 
ನೋಡಿದರೆ ಸಾಕು ನಯನಕೆ ಶಾಂತಿ 
ಭೂ ಮಾತೆಯೇ ನಿನಗೆ ತಾಕುವುದು ದೃಷ್ಟಿ 
ಸಲಾಮು ಹೊಡೆಯಲೇಬೇಕು ಏನಿಂತ ಸೃಷ್ಟಿ।।

ಏನು ಅಡಗಿದೆಯೋ ಆ ಒಂದು ಹನಿಯಲಿ 
ಭಗವಂತನ ಆನಂದದ  ಭಾಷ್ಪದಲಿ 
ಎಷ್ಟು  ಕಂಡರು ಸಾಲದು ಭುವಿಯ ಈ ದಿವ್ಯ ಕಳೆ 
ಹೀಗೆಯೇ ದಿನವು ಆಗುತಿರಲಿ ಮಳೆ ।।
---
ಗುರುರಾಜ 

ಸೋಮವಾರ, ಅಕ್ಟೋಬರ್ 14, 2013

ನಯನವಿರದ ನಾಯಕ

Image result for blind man

ನಯನವಿರದ ನಾಯಕ ನಾನು 
ದೋಣಿಯೆ ಇಲ್ಲದ ನಾವಿಕನಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ
ಒಂದು ಹನಿಯು ಚಿಮ್ಮದ ಕಾರ್ಮುಗಿಲಂತೆ।।

ಕನಸಿನ ಕೈಬೆರಳು ಹಿಡಿದು ಹೊರಟಿಹೆ ನಾನು
ಏನು ತಿಳಿಯದ ಮುಗ್ದನಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ 
ಯಾರು ಓದದ ಪುಸ್ತಕದ ಮುನ್ನುಡಿಯಂತೆ।।

ಕಡುಗಪ್ಪು ಒಂದೇ ಬಣ್ಣವೆಂದವನು ನಾನು 
ಎಲ್ಲ ತಿಳಿದ ಮೂರ್ಖ ಮೇಧಾವಿಯಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ 
ಗಾಳಿಗೆ ಓಲಾಡಿದ ಮಗುವಿರದ ತೊಟ್ಟಿಲಂತೆ ।।

ಕಾಸು ಕಾಸೆಂದು ಅದರ ಕಾಲು ಹಿಡಿದವ ನೀನು 
ಜೊಲ್ಲು ಸುರಿಸುತ ಆಸೆ ಬುರುಕನಂತೆ
ನಿನ್ನಯ ಜೀವನವಿದು ಏನೆಂದು ಹೇಳಲಿ 
ಕಣ್ಣಿದರು ಹೆಚ್ಚು ಕಡಿಮೆ ನನ್ನಂತೆ।।
--
ಗುರುರಾಜ

ಶನಿವಾರ, ಸೆಪ್ಟೆಂಬರ್ 14, 2013

ನಾ ಶಾಲೆಗೆ ಹೋಗೆನಮ್ಮ


ಬೇಸಿಗೆಯ ರಜೆ ಮುಗಿದು
ಜೂನ್ ತಿಂಗಳು ಬಳಿ ಸುಳಿದು 
ಕೈ ಬೀಸಿ ಕರೆದಿದೆ ನನ್ನ 
ಶಾಲೆ ಶುರುವಾಗಿದೆ ಬಾ ಚಿನ್ನ ।।

ಎರಡು ತಿಂಗಳು ಕಳೆದು ಹೋಯಿತು 
ಸೋಂಬೇರಿತನವ ಸಾಕಿ ಸಲುಹಿತು 
ಮೆದುಳಿಗೆ ತುಕ್ಕು ಹಿಡಿದ ಅನುಭವ 
ನರನಾಡಿಗಳ ಕೋಪದ ರುದ್ರ ತಾಂಡವ।।

ಓ ನನ್ನ ಶಾಲೆ ಏಕಿಷ್ಟು ಅವಸರ ನಿನಗೆ 
ಬರಬಾರದೇ ಮುಂದಿನ ತಿಂಗಳ ಕೊನೆಗೆ 
ಬಾಕಿ ಉಳಿದಿರುವಾಗ ಇಷ್ಟೊಂದು ಆಟ 
ಯಾಕಿಷ್ಟು ಬೇಗ ಸುಮ್ಮನೆ ಲೆಕ್ಕದ ಪಾಠ ।।

ನೀ ಹೇಳು ತಾಯಿ ಶಾಲೆಗೆ  ವಾಪಸ್ಸು ಹೋಗಲು 
ಯಾವ ಶಾಲೆಗಿಲ್ಲ ಧೈರ್ಯ ನಿನ್ನ ಮಾತು ಮೀರಲು 
ಬೇಕಾದ್ದು ಕಲಿಯುವೆ ನಾನು ನಿನ್ನ ಮಡಿಲಲ್ಲೇ 
ಬೇರೆ ಯಾವ ಶಾಲೆಗೆ  ಹೋಗಲು ನಾ ಒಲ್ಲೆ ।।
--
ಗುರುರಾಜ 

ಸೋಮವಾರ, ಜೂನ್ 17, 2013

ಅವಳ ಮದುವೆ


Image result for indian marriage sketch

ಪ್ರೀತಿಯನು ಬೆರೆಸಿ
ಕನಸುಗಳ ಕುಣಿಸಿ
ಬರೆದ ನೆಚ್ಚಿನ ಸಾಲುಗಳಿವು
ಇಂದು ಯಾರದೋ ಪಾಲಾಗಿದೆ ॥

ನೀರನ್ನು ಚಿಮ್ಮಿಸಿ
ಒಣ ಬಟ್ಟೆಯಲಿ ಒರೆಸಿ
ಮಿನುಗಿಸಿದ ಕನ್ನಡಿಯಲಿ
ಇಂದು ಯಾರದೋ ಪ್ರತಿಬಿಂಬವಿದೆ॥

ನನ್ನದೇ ಚಿತ್ರದಲಿ
ನಾ ಬರೆದ ಕಥೆಯಲಿ
ನನ್ನದೇ ಕಲ್ಪನೆಯ ದೃಶ್ಯದಲಿ
ಇಂದು ಯಾರದೋ  ಅಭಿನಯವಿದೆ॥

ಹಸಿರು ಬಾಳೆ ಎಲೆ
ಬಾಯೂರಿಸುವ ತುಪ್ಪ
ಮೃಷ್ಟಾನ್ನ ಭೋಜನ
ಇಂದು ಇದು ಮಾತ್ರ ನನ್ನ ಪಾಲಿಗಿದೆ॥

---
ಗುರುರಾಜ  

ಮಂಗಳವಾರ, ಜೂನ್ 11, 2013

ನಾ ಒಬ್ಬಂಟಿಯಾದಾಗ



ತೀರದ  ಬಯಕೆಗಳು
ಗುಡುಗಿನಂತೆ ಒಂದರ ಹಿಂದೆ 
ಒಂದೊಂದು ಗುಡುಗಿರಲು 
ಮನಸ್ಸು ಮುದುರಿ ಮೂಲೆ ಸೇರಿತು 
ನಾ ಒಬ್ಬಂಟಿಯಾದಾಗ ॥ 

ಕಾಡುವ ನೆನಪುಗಳು 
ಗಾಳಕ್ಕೆ ಸಿಕ್ಕಿದ ಮೀನಿನಂತೆ 
ಒದ್ದಾಡಿ ಒದ್ದಾಡಿ ಸಾಯುತಿರಲು 
ಮನಸ್ಸು ಚದುರಿ ಮೂಲೆ ಸೇರಿತು 
ನಾ ಒಬ್ಬಂಟಿಯಾದಾಗ ॥

ಜೋರಾಗಿ ಬೀಸಿದ ಗಾಳಿಗೆ
ಧೂಳು ತುಂಬಿದ ಬಾಳಪುಸ್ತಕದ ಪುಟಗಳು
ಜೋರಾಗಿ ಬಡಿಯುತಿರಲು
ಮನಸ್ಸು ಹೆದರಿ  ಮೂಲೆ ಸೇರಿತು 
ನಾ ಒಬ್ಬಂಟಿಯಾದಾಗ ॥

ಮೂಲೆ ಸೇರಿದ ಮನಸನು
ದೂರದ ಮಸಣವು ಕೈಬೀಸಿ
ತನ್ನತ್ತ ಸೆಳೆಯುತಿರಲು
ಮನಸ್ಸು ಎಗರಿ ನಾ ಬದುಕುವೆನೆಂದಿತು
ನಾ ಒಬ್ಬಂಟಿಯಾದಾಗ ॥
--
ಗುರುರಾಜ 

ಶನಿವಾರ, ಮೇ 25, 2013

ನಿರಾ(ಆ)ಶಾವಾದ


ಆ ದಿನ ಒಬ್ಬನೇ ಸಾಗರದ ದಂಡೆಯಲಿ
ಮರಳ ಮೇಲೆ ಕುಳಿತಿರಲು ನಲಿವಿನಲಿ
ರಭಸದಿ ಬಂದ ಅಲೆಯು ಒಂದೊಂದು
ಕಥೆಯ ನುಡಿದಿತ್ತು ನನಗಂದು॥

ಸೂರ್ಯನು ಮುಳುಗಿದರೆ ಹೀಗೆ
ನಾನಂತೂ ತಾಳಲಾರೆ ಅವನ ಬೇಗೆ
ಕಾಪಾಡು ನನ್ನನು ಎಂದು ಕಿರಚುತ
ಓಡಿ ಬಂತು ಅಲೆಯು ಹೆದರುತ ॥

ಹಿಂದೆಯೇ ಬಂತೊಂದು  ಅಲೆಯು ಕುಣಿಯುತ
ಹಾಗೆಯೇ ತನ್ನ ಸೊಂಟವ ಬಳಕುತ
ಹೇಳಿತು ನೋಡಲ್ಲಿ ಬಂದಿರುವನು ನನ್ನ ನಲ್ಲ
ಎಷ್ಟು ಚಂದ ಅವನ ಹಾಲು ಮುಖದ ಗಲ್ಲ ॥

ಎಷ್ಟೊಂದು ಭಿನ್ನ ಒಂದೊಂದು ಅಲೆಯ ಯೋಚನೆ
ಆಶಾವಾದ ನಿರಾಶಾವಾದದ ಕಲ್ಪನೆ
ಏಕಿಷ್ಟು ಕವಲು ಅವನ ಈ ಸೃಷ್ಟಿಯಲ್ಲಿ
ಎಲ್ಲರ ಬದುಕು ನಡೆದಿದೆ ಅವರವರ ದೃಷ್ಟಿಯಲ್ಲಿ

--
ಗುರುರಾಜ 

ಸೋಮವಾರ, ಮೇ 6, 2013

ಆ ಒಂದು ಕರೆ...



ಸಿಹಿ ನಿದಿರೆಯಲಿ ಜಾರಿದಾಗ
ಬಂದಿತೊಂದು ಕರೆ
ಸಿಹಿಯಾದ ಆ ಧನಿಯ ಕೇಳಿದಾಗ
ಎದ್ದು ಕುಳಿತೆ ಖರೆ॥

ಪದಗಳವು  ಜೇನಿನಂತೆ
ಕಿವಿಯೊಳಗೆ ಇಳಿಯುತಿರಲು ಹಾಗೆ
ಸತ್ತ ಹೃದಯವಿದು
ಏಕೋ ಕುಣಿಯುತಿದೆ ಹೀಗೆ ॥

ಅಕ್ಷರಗಳ ಜೋಡಣೆಯಲಿ
ಅವಳದೇ ವಿಭಿನ್ನತೆ
ಮಾತುಗಳ ಮಧ್ಯದಲಿ
ಮುಗುಳ್ನಗೆಯ ಮುಗ್ದತೆ ॥

ಯಾವ ಜನ್ಮದ ಅದೃಷ್ಟವೋ
ಕರಣಕೆ ಇಂದು
ತನ್ನ ಪಾಪವನೆಲ್ಲ ತೊಳೆದ ಹಾಗೆ
ಗಂಗೆಯಲಿ ಮಿಂದು॥

ಕರೆ ಮಾಡಿದ ಉದ್ದೇಶವದು
ಮಾರಲು ನನಗೆ ಸಾಲದ ಚೀಟಿ
ಏನು ಮಾಡಲಿ  ನಾನು ಕಾಸಿಲ್ಲ
ಬೇಡವೆಂದೆ ಹೃದಯವನು ಚಿವುಟಿ॥
--
ಗುರುರಾಜ 

ಶನಿವಾರ, ಏಪ್ರಿಲ್ 20, 2013

ನಾಲ್ಕು ತಿಂಗಳು..(ಒಂದು ಕಥೆ)

(ಪ್ರಸ್ತುತ )

"ಸಂಜಯ್ ... ನಾನು ನಿಮ್ ರಕ್ತನ ಅವ್ರ ಅಮ್ಮಂಗೆ ಕೊಡೋಕ್ಕಾಗಲ್ಲ" ಎಂದು ಹೇಳಿ ಆ ಕಾಗದದ ತುಂಡನ್ನು
ಮೇಜಿನ ಮೇಲೆ ಇಟ್ಟು ಮೆಲ್ಲಗೆ ಉಸಿರು ಬಿಡುತ್ತ ಕುರ್ಚಿಯ ಮೇಲೆ ಕುಳಿತು ಕೊಂಡ ಡಾಕ್ಟರ್,  ಸಂಜಯನ ಸ್ನೇಹಿತನ ಕಡೆಗೊಮ್ಮೆ ದೃಷ್ಟಿ ಹಾಯಿಸಿದರು.
"ಡಾಕ್ಟ್ರೆ!!! ಯಾಕೆ ?? ಏನಾಯ್ತು...  ನಂದು ಬ್ಲಡ್ ಗ್ರೂಪ್  B+Ve ತಾನೆ"  ಎಂದು ಸ್ವಲ್ಪ ಜೋರಾದ ಕಂಠದಲ್ಲಿ ಕೇಳಿದ ಸಂಜಯ್.
"ಸಂಜಯ್ ರಿಲಾಕ್ಸ್!!!"ಎಂದವರು  ಸ್ವಲ್ಪ ಹೊತ್ತಿನ ಮೌನದ ನಂತರ "ನೀವು ಸ್ವಲ್ಪ ಧೈರ್ಯ ತಗೊಳ್ಬೇಕು!!!" ಎಂದು ಮತ್ತೆ ಮೌನಕ್ಕೆ ಶರಣಾದರು.
ಸಂಜಯನ ಎದೆ ಬಡಿತ ಆ ಕ್ಷಣವೇ ಉತ್ತುಂಗಕ್ಕೆ ಏರಿತು. ಏನು ತೋಚದಂತಾಗಿ ಮತ್ತೊಮ್ಮೆ ಜೋರಾಗಿ ಕೇಳಿದ
"ಅಂತದ್ದು ಏನಾಗಿದೆ ಡಾಕ್ಟ್ರೆ!!!!".
"ಇಟ್ಸ್ ಲೂಕೆಮಿಯ..... ಅಂದ್ರೆ ಸಾಮಾನ್ಯ ಮನುಷ್ಯನ ಭಾಷೆಯಲ್ಲಿ ಬ್ಲಡ್ ಕ್ಯಾನ್ಸರ್ " ಎಂದು ಡಾಕ್ಟರ್ ಸಂಜಯನ ಬಳಿ ಬಂದರು.
ಆ ಮಾತನ್ನು ಕೇಳಿದೊಡನೆಯೇ ಅಲ್ಲೇ ಕಣ್ಣ ಮುಂದೆ ಕತ್ತಲಾವರಿಸಿ ಜೊತೆಯಲ್ಲೇ ಇದ್ದ ಸ್ನೇಹಿತನ ಮೇಲೆ ತಲೆ ಸುತ್ತಿ ಬಿದ್ದನು.
ಅವನ್ನನ್ನು ಹಿಡಿದು ಮೆಲ್ಲಗೆ ಕುರ್ಚಿಯ ಮೇಲೆ ಕೂರಿಸಿ ,ಮುಖಕ್ಕೆ ನೀರನ್ನೆರಚಿದರು.
ಹಾಗೆ ಕಣ್ಣ ಬಿಡುತ್ತ ಸಂಜಯ್ ಮುಖವನ್ನೋರಸಿಕೊಂಡು ಸ್ವಲ್ಪ ಹೊತ್ತು ಮೌನಕ್ಕೆ ಶರಣಾದನು.
ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡು ,"ಡಾಕ್ಟ್ರೇ , ಇನ್ನು ಎಷ್ಟು ಸಮಯ ಇದೆ ನನ್ನ ಹತ್ತಿರ" ಎಂದನು.

ಡಾಕ್ಟರ್ "ಇನ್ನು ಹೆಚ್ಚೆಂದರೆ ನಾಲ್ಕು ತಿಂಗಳು" ಎಂದರು".


(ಎರಡು ಘಂಟೆಯ ಮುಂಚೆ )
ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸಂಜಯನಿಗೆ, ಒಂದು ಕರೆ ಬಂದಿತ್ತು . ಮೊಬೈಲ್ ನಲ್ಲಿ ಅವಳ ಹೆಸರ ನೋಡುತ್ತಿದಂತೆಯೇ ಏನೋ ಒಂದು ರೀತಿಯಾದಂತ ಖುಷಿ ಅವನಲ್ಲಿ ಮನೆ ಮಾಡಿತು.
ಕೂಡಲೇ ಕರೆ ಸ್ವೀಕರಿಸಿ "ಹಲೋ ಸಂಗೀತ!! ಹೇಗಿದ್ದೀಯ ಏನು ಇದ್ದಕಿದ್ದ ಹಾಗೆ ಫೋನ್ ಮಾಡಿದ್ದೀಯ".
ಅವಳು "ಸಂಜಯ್ !! ನಿನ್ನ ಹತ್ರ ನಾನು ಸ್ವಲ್ಪ ಮಾತಾಡ್ಬೇಕು... ಎಲ್ಲಾದರು ಸಿಗ್ತಿಯ".
"ಆಯ್ತು ರೀ !!! ನಾವ್ ಮೀಟ್ ಮಾಡ್ತಿದ್ದ ಪಾರ್ಕಿಗೆ ಬರ್ತೀನಿ ಇನ್ನು ಅರ್ಧ ಗಂಟೇಲಿ "ಎಂದನು.
ಅವಳು"ಅಯ್ತು" ಎಂದು ಫೋನ್ ಇಟ್ಟಳು.
(ಪಾರ್ಕಿನಲ್ಲಿ )
"ಹಾಯ್ ಸಂಗೀತ !! ಸಾರೀ ರೀ ... ಸ್ವಲ್ಪ ಲೇಟ್ ಆಯ್ತು!! ಏನ್ ವಿಷ್ಯ ... ಇಷ್ಟೊಂದು ಆತುರದಲ್ಲಿ ಫೋನ್ ಮಾಡಿದ್ರಿ " ಎಂದು ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದನು.
ಅವಳು ಹಾಗೆಯೇ ನಾಚಿ ನೀರಾಗಿ ಒಂದು ಕ್ಷಣ ಮೌನದ ನಂತರ "ಏನಿಲ್ಲ... ನೀವು ಆ ದಿನ ನನಗೆ ನನ್ನನ್ನ ಮದುವೆ ಆಗುತ್ತಿಯ ?? ಎಂದು ಕೇಳಿದ್ರಲ್ಲ .. ಅದಕ್ಕೆ ಉತ್ತರ ಕೊಡೋಣ ಅಂತ ಬಂದೆ".
ಇದನ್ನು ಕೇಳಿದ ತಕ್ಷಣ ಏನೋ ಒಂದು ಆತಂಕ ಮತ್ತು ಉತ್ಸಾಹ ಅವನಲ್ಲಿ ಮನೆ ಮಾಡಿ "ಹೇಳಿ ಏನ್ ಅಂತ ಯೋಚನೆ ಮಾಡಿದ್ದೀರಾ???!!!" ಎಂದನು.
ಅದಕ್ಕೆ ಪ್ರತ್ಯುತ್ತರವಾಗಿ "ನೀವೇ ನನಗೆ ಸರಿ ಅಂತ ನಿರ್ಧಾರ ಮಾಡಿದ್ದೀನಿ" ಅನ್ನಲು ಅವನಿಗೆ ಏನು ಮಾಡಲು ತಿಳಿಯದೆ
ಒಮ್ಮೆ ಜೋರಾಗಿ "ಥ್ಯಾಂಕ್ಸ್!!!!!!!ಸಂಗೀತ "ಎಂದು ಕಿರುಚಿದನು.
ಅವಳು ಅವನನ್ನು ಸಂಭಾಳಿಸುತ್ತ "ಆದರೆ ನಮ್ಮ ಮನೆಯಲ್ಲಿ ಎಲ್ಲರನ್ನು ಒಪ್ಪಿಸಲು ಸ್ವಲ್ಪ ಸಮಯ ಬೇಕಾಗ ಬಹುದು" ಎಂದಳು .
ಅವನು"ಪರವಾಗಿಲ್ಲ ಎಷ್ಟು ಸಮಯ ಬೇಕಾದ್ರೂ ತಗೊಳ್ರಿ .. ನೀವ್ ಸಿಗ್ತೀರ ಅಂದ್ರೆ ಎಷ್ಟು ಜನ್ಮ ಬೇಕಾದ್ರೂ ಕಾಯ್ತೀನಿ..
ಅಂದಾಜು ಎಷ್ಟು ಸಮಯ ಬೇಕಾಗ ಬಹುದು ಹೇಳ್ರಿ ... ಸುಮ್ನೆ ಕುತೂಹಲ".
ಅವಳು " ಏನಿಲ್ಲ ಅಂದ್ರು ನಾಲ್ಕು ತಿಂಗಳು ಬೇಕು" ಎಂದಳು.
--
ಗುರುರಾಜ 

ಮರಳಿ ಬಾ ಯೋಧ ಗೂಡಿಗೆ



ಮನೆಯ ಅಂಗಳವದು
ನಿನ್ನ ಕೀಟಲೆಯ ಕಾಣಲು ಕಾದಿರುವಾಗ
ನಿನ್ನ ತಂಗಿಯ ಮೂಗದು
ಸುಮ್ಮನೆ ಕೋಪಗೊಳ್ಳಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ತಂಗಿಯ ಕೆಣಕದೆ ॥

ಊರಿನ ಜಗುಲಿಯ ಕಟ್ಟೆಯದು
ನಿನ್ನ ತುಂಟ ಮಾತನು ಕೇಳಲು ಕಾದಿರುವಾಗ
ನಿನ್ನ ಗೆಳೆಯನ ಬಾಯದು
ನಿನ್ನ ಬೈಯ್ಯಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ಗೆಳೆಯನ ಕಾಲೆಳೆಯದೆ॥

ಗೌಡರ ಗೆದ್ದೆಯದು
ನಿನ್ನ ರಸಿಕತೆಯ ಕಾಣಲು ಕಾದಿರುವಾಗ
ಗೌಡರ ಮಗಳ ತುಟಿಯದು
ನಾಚಿ ನೀರಾಗಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ಪ್ರೇಯಸಿಗೆ ಮುತ್ತಿಕ್ಕದೆ ॥

ಒಲೆಯ ಮೇಲಿರುವ ಅಂಬಲಿ
ನಿನ್ನ ತಣಿಸಲು ಕಾದಿರುವಾಗ
ನಿನ್ನ ತಾಯಿಯ  ಕೈಯದು
ತುತ್ತನಿಕ್ಕಲು  ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನೆತ್ತವಳ ಮಡಿಲ ಸೇರದೆ॥

---
ಗುರುರಾಜ 

ಶನಿವಾರ, ಮಾರ್ಚ್ 16, 2013

ಕನ್ಸು...ಸುಮ್ಗೆ ತಮಾಷೆಗೆ



ಹಾಗೆ ಸುಮ್ಗೆ ನಡ್ಕೊಂಡ್ ಬಂದೆ
ಅಕಾಶ್ದ ಕೆಳಗೆ  ಮೆಲ್ಗೆ
ಸುಸ್ತಾಗೊಯ್ತು ಮಲ್ಕೊಂಡ್ ಬಿಟ್ಟೆ
ಭೂಮಿ ಮೇಲೆ ಹಂಗೆ॥

ಹಾಗೆ ತಣ್ಣಗ್ ಗಾಳಿ ಬೀಸ್ತು
ನಿದ್ದೆ ಮಾಡ್ದೆ ಅಲ್ಲೆ
ಹಿಂದಿಂದೇನೆ ಬಂದೆ ಬಿಟ್ಲು
ಕನಸಲ್ ನನ್ ನಲ್ಲೆ॥

ಏನ್ ಅಂದ ಏನ್ ಚಂದ
ಹೇಳೋದ್ ವಸಿ ಕೇಳಿ
ಅವಳ್ ಗಿಂತ ಚಂದ  ಹುಡ್ಗಿ ಸಿಕ್ಕರೆ
ಬಿರ್ರನೆ ಬಂದು ಹೇಳಿ॥

ಅವಳ್ ಅಂಗೆ ನಕ್ಕ್  ಬಿಟ್ರಂತು
ಬರಗಾಲ್ದಲ್ಲೂ ಸುಗ್ಗಿ
ತಿರ್ಗಿ ಕಣ್ಣ ಹೊಡ್ದು ಬಿಟ್ರೆ
ಮರಿದೆ ಇರ್ತದ ಮಗ್ಗಿ ॥

ಬಂಡೆಗಲ್ ನು  ಮಾತಾಡ್ ಸ್ತಾಳೆ
ಅಂತ ಮಾತಿನ ಮಲ್ಲಿ
ಊರ್ ತುಂಬಾ ಓಡಾಡ್ ತಾಳೆ
ತುಂಟ ನಗೆಯ ಚೆಲ್ಲಿ ॥

ನಂಗೆ ಅವ್ಳು ಸಿಗ್ಲಿ ಅಂತ
ದ್ಯಾವರನ್ನ ಬೇಡ್ಕೊಂಡ್ ಬಿಟ್ಟೆ
ನೂರೊಂದ್ ತೆಂಗಿನ ಕಾಯಿ ಹರಕೆ
ಜೊತಗೆ ಬೆಳ್ಳಿ ತಟ್ಟೆ ॥

ದ್ಯಾವ್ರಿಗ್ಯಾಕೋ ಕೋಪ ಬಂತು
ಭೂಮಿಗೆ ಬರ್ತಾ ಅವ್ನೆ
ಯಾಕೋ ಸುಮ್ಗೆ ದಿಗ್ಲ್ ಹತ್ಕೊಂತು
ಏನ್ ಕಾದಿದ್ಯೋ ಶಿವನೆ ॥

ದಿಕ್ಕೇ ಇಲ್ಲದ್  ಪರದೇಸಿ ನೀನು
ಯಾಕೋ ಪ್ರೀತಿ ಪಾಠ
ಬಡವ ನೀನು ಮಡಗ್ದಂಗಿರು
ಅಂತ ಹೋಗೆ ಬಿಟ್ಟ  ॥

ಕ್ಷಮಿಸು ದೇವ ತಪ್ಪಾಗೋಯ್ತು
ಇನ್ನು ಹುಡ್ಗನ್ ವಯಸ್ಸು
ಅಂತ ಅಂಗೆ ಕಣ್ಣ ಬಿಟ್ಟೆ
ಮುಗಿತು ತಿರಕನ ಕನಸು॥
--
ಗುರುರಾಜ 

ಶನಿವಾರ, ಮಾರ್ಚ್ 2, 2013

ರಾಧೆಯ ಕೂಗು



ಕಣ್ಣ ಮುಚ್ಚಿ ತೆರೆದಾಗ ಕಾಣದ ನಿನ್ನ ವದನ
ಹಾಗೆಯೇ  ಕಂಬನಿ ಕಣ್ಣ ರೆಪ್ಪೆಗಳ ಮಿಲನ 
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ನಿನ್ನ ನೆನಪುಗಳ ನನ್  ಹಣೆಗೆ ಚುಂಬಿಸಿ
ಮನದಾಳದಲಿ ಅಲೆಗಳನ್ನೆಬ್ಬಿಸಿ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥ 

ಪ್ರೇಮ ರಾಗವನು ಸಂಗಡ ಹಾಡಿ 
ಆ ಸಂಜೆ ಏಕಾಂತದಲಿ ಏಕಾಂಗಿ ಮಾಡಿ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ಪ್ರೇಮದಂಬರದಲಿ ಸೂರ್ಯನಂತೆ ಮೆರೆದು
ಮೆಲ್ಲನೆ ಮೋಡದ ಮರೆಯಲಿ ಸರಿದು
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ಲೋಕವೇ ನೀನೆಂದವಳನು ತಿರಸ್ಕರಿಸುತ
ಲೋಕೊದ್ಧಾರದ ಮನವಿಯನು ಪುರಸ್ಕರಿಸುತ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥
---
ಗುರುರಾಜ
(ಎಚ್  ಎಸ್  ವೆಂಕಟೇಶ್ ಮೂರ್ತಿ ಯವರ ಲೋಕದ ಕಣ್ಣಿಗೆ ರಾಧೆಯು ಕೂಡ ಹಾಡಿನಿಂದ ಸ್ಪೂರ್ತಿ ಪಡೆದು ಬರೆದ ಪದ್ಯ)

ಗುರುವಾರ, ಫೆಬ್ರವರಿ 21, 2013

ಶರಣು ಯೋಧ




ಬಿಸಿಲು ಮಳೆ ರಾತ್ರಿ ಹಗಲೆನ್ನದೆ
ಯಾವ ಶತ್ರುವಿಗೂ ಜಗ್ಗದೆ 
ಭಾರತಾಂಬೆಗೆ ಮುಡಿಪಾಗಿದೆ ನಿನ್ನೆದೆ 
ಹೇಗೆ ಇರಲು ಸಾಧ್ಯ ನಿನಗೆ ಶರಣು ಎನ್ನದೆ॥

ಮೌನ ತಬ್ಬಿದ ಮಂಜಿನಲಿ
ಕ್ಷಣಕ್ಷಣವು ಕೇಳುವ ಗುಂಡಿನ ಸದ್ದಿನಲಿ
ಶತ್ರು ನಾಶದ ಗುಂಗಿನಲಿ
ಘರ್ಜಿಸುವ ನೀನೆ ನಿಜವಾದ ಗಂಡುಗಲಿ॥

ಸಾರಥಿಯೇ ಇಲ್ಲದ ಪಾರ್ಥ
ಅವಳಿಗೆ ನಿನ್ನ ಸೇವೆಯು ನಿಸ್ವಾರ್ಥ
ನಿನ್ನ ಬದುಕಿಗಿದೆ ಸಾವಿರ ಅರ್ಥ
ನಿನ್ನ ಗೌರವಿಸದಿರೆ ನಾವು ಸಾವಿಗೂ ಅಸಮರ್ಥ॥

ನಿನ್ನ ಹೆಸರು ಕೇಳಿದರೆ ಶತ್ರುವಿಗೆ ನಡುಕ
ನಿನ್ನೆದುರು ಸಿಕ್ಕರೆ ಅವನ ಜೀವನ ಕ್ಷಣಿಕ
ಸಾಹಸ ಗುಂಡಿಗೆಯಲಿ ನೀನೆ ಧನಿಕ
ನಿನ್ನ ನೆನೆಯಲು ಮನಸಲ್ಲಿ ಏನೋ ಪುಳಕ॥

ಭವ್ಯ ಭಾರತದ ಕನಸು ಹೊತ್ತು ಆ ದಿನ
ತಾಯಿ ಮುಡಿಪಿಟ್ಟಳು ಅವಳ  ಈ ಕಂದನ
ನಿನ್ನಿಂದಲೆ ಬೆಳಕು ಕಾಣುತ್ತಿದೆ ಹಲವು ಜೀವನ
ಸೈನಿಕನೆ ನಿನಗೀ  ನಾಗರಿಕನ ನಮನ॥
---
ಗುರುರಾಜ 

ಬುಧವಾರ, ಫೆಬ್ರವರಿ 13, 2013

ಒಂದು ಸಣ್ಣ ಕಥೆ -೬

ನನ್ನ ಮಗ ದೊಡ್ಡವನಾದ ಮೇಲೆ ಕಾರಿನೊಳಗೆ ಕೂಡಿಸಿ 
ಊರೆಲ್ಲ ಸುತ್ತಿಸುವನೆಂದು ಕನಸು ಕಾಣುತ್ತ ಫುಟ್ ಪಾತ್  ಬಳಿಯಲ್ಲಿ 
ಮಲಗಿದ್ದವನ ಮೇಲೆ ಕಾರು ಹರಿದು ಸಾವನ್ನಪ್ಪಿದ.
--
ಗುರುರಾಜ 

ಮಂಗಳವಾರ, ಫೆಬ್ರವರಿ 12, 2013

ಅಮ್ಮಾ !!!



ಎಲ್ಲೋ ಸುಮ್ಮನೆ ಮಲಗಿದ್ದ ನನ್ನ ಆತ್ಮ
ಜೋರಾಗಿ ಕೂಗಿ ಕರೆದನಾ ಬ್ರಹ್ಮ
ನಿನಾಗಾಗಿ ಕಾಯುತ್ತಿರುವಳು ನಿನ್ನ ಅಮ್ಮ
ಕೊಡಲು ನಿನಗೆ  ಮಾನುಷ ಜನ್ಮ ॥

ಅವನಾಜ್ಞೆಯಂತೆ ಬಿದ್ದೆ ಇವಳ ಮಡಿಲಿನಲಿ
ಎಂದಿಗೂ ಬತ್ತದ ವಾತ್ಸಲ್ಯದ ಕಡಲಿನಲಿ
ಹಾಲಾಮೃತವ ಉಣಿಸಿದಳು  ನಲಿವಿನಲಿ
ನನ್ನ ನೋಡುತ ಅವಳೆಲ್ಲ ನೋವನು ಮರೆಯುತಲಿ॥

ಚಂದಿರನ ತೋರಿಸಿ ತುತ್ತನು ಎಣಿಸುತ
ಬಾಯಿಗೆ ಇಟ್ಟಳು ಆನೆ ಬಾಯಿ ತೆರೆಸುತ
ಚೇಷ್ಟೆಗಳ ಮಾಡಿದರೆ ಕಿವಿಯನು ಹಿಂಡುತ
ಸುಮ್ಮನೆ ಹೆದರಿಸಿದಳು ಅಪ್ಪನ ಕರೆಯುತ॥

ಅಕ್ಷರಮಾಲೆಯ ತಲೆಗೇರಿಸಿದವಳು
ಸರಿ ತಪ್ಪೆಂಬ ವ್ಯತ್ಯಾಸವ ತಿಳಿಸಿದವಳು
ಬೇಕೆಂಬ ಹೊತ್ತಿಗೆ ಮೃಷ್ಟಾನ್ನವ ಬಡಿಸಿದವಳು
ನಾನೇ ಅವಳ ದೇವರೆಂಬಂತೆ ಬೆಳೆಸಿದವಳು॥

ಆ ಮಾತೆಯ ಋಣವ ನಾನೆಂದು ತೀರಿಸಲಾರೆ
ಅವಳ ಪ್ರೀತಿಯ ನಾನೆಂದು ಮೀರಿಸಲಾರೆ
ಮಾತೃ ಬಾಂಧವ್ಯದ ಚಕ್ರವ್ಯೂಹವನೆಂದು ಭೇದಿಸಲಾರೆ
ಅಮ್ಮಾ !! ನಿನಗಾಗಿ ಮುಡಿಪು ಈ ಸಣ್ಣ ಕಾವ್ಯಧಾರೆ॥
---
ಗುರುರಾಜ 

ಮಂಗಳವಾರ, ಫೆಬ್ರವರಿ 5, 2013

ಒಂದು ಸಣ್ಣ ಕಥೆ ೫

ದೇವರೇ ನೀನೆ ಗತಿ ಎಂದು ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿದ್ದ
ಪೂಜಾರಪ್ಪ ರಾಮಶಾಸ್ತ್ರಿಯ  ಮಗಳು ಇಂದು ಯಾವುದೋ ಹುಡುಗನ ಜೊತೆ
ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾದಳಂತೆ..
---
ಗುರುರಾಜ

ಒಂದು ಸಣ್ಣ ಕಥೆ - ೪

ಕೆಲಸ ಸಿಗದ ಬೇಸರದಲ್ಲಿ ಒಬ್ಬನೇ ಪಾರ್ಕಿನಲ್ಲಿ ಕುಳಿತ್ತಿದ್ದಾಗ
ಭಿಕ್ಷುಕನೊಬ್ಬ ಬಂದು "ಅಣ್ಣ ಏನಾದ್ರು ಇದ್ರೆ.....ಕೊಡಣ್ಣ " ಎನ್ನಲು
ಆ ವಿಧಿಯೇ ನನ್ನನ್ನು ಕುಹುಕ ಮಾಡಿದಂತೆ ಆಭಾಸವಾಯಿತು...
--
ಗುರುರಾಜ 

ಶನಿವಾರ, ಜನವರಿ 26, 2013

ಮುದುಡಿದ ಕನಸು



ಸಂಜೆಯ ಕಿರುಬೆರಳು ರಾತ್ರಿಯನು ತಾಕಲು
ರಾತ್ರಿಯು ಕೋಪದಿ ಬೆಳಕನು ಕರೆದಿರಲು
ಬೆಳಕು ಉತ್ಶಾಹದಿ ಚಿಮ್ಮುತ ಬರುತಿರಲು
ಬಂದೊಡನೆಯೇ ಕಣ್ಣ ರೆಪ್ಪೆಯ ಕೆಣಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ಮಾಘದ ಗಾಳಿಯು ಜೋರಾಗಿ ಬೀಸಲು
ಬೆಟ್ಟವು ಆಹ್ಲಾದದಿ ತಲೆಯ  ತೂಗಿರಲು
ಅರ್ಧ ತುಂಬಿದ ಮೋಡವು ತಾನಾಗಿ ಕುಲಕಲು
ಆ ಒಂದು ಹನಿಯು ಕಣ್ಣ ರೆಪ್ಪೆಯ  ತಾಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ತಾರೆಗಳೂರಿನ ಬಾನ ತೋಟವ ಕಾಯಲು
ರವಿಯ ನಂತರ ಚಂದಿರನ ಸರದಿ ಬಂದಿರಲು
ಸಾಗರವು ಸಂತಸದಿ ಅಲೆಗಳನು ತೂರಿರಲು
ಅಲೆಗಳದು ಬಂದು ಕಣ್ಣ ರೆಪ್ಪೆಯ ಸೋಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ಊರಿಗೆ ಹೋದವಳು ವಾಪಸ್ಸು ಬಂದಿರಲು
ನಿನ್ನಯ ಮೊಗದಲ್ಲಿ ನಾಚಿಕೆಯು ತುಂಬಿರಲು
ಕಾಲಲ್ಲಿ ನೀನಂದು ರಂಗೋಲಿಯ ಬಿಡುತಿರಲು
ಕಾಲ್ಬೆರಳ ಸಂಧಿಯಲಿ ಕಾಲುಂಗುರ ಕಂಡಾಗ
ನಿನ್ನಯ ಕನಸದು ಅಲ್ಲಿಯೇ ಅಸುನೀಗಿತು ।।
--ಗುರುರಾಜ