ಪುಟಗಳು

ಶನಿವಾರ, ಮೇ 25, 2013

ನಿರಾ(ಆ)ಶಾವಾದ


ಆ ದಿನ ಒಬ್ಬನೇ ಸಾಗರದ ದಂಡೆಯಲಿ
ಮರಳ ಮೇಲೆ ಕುಳಿತಿರಲು ನಲಿವಿನಲಿ
ರಭಸದಿ ಬಂದ ಅಲೆಯು ಒಂದೊಂದು
ಕಥೆಯ ನುಡಿದಿತ್ತು ನನಗಂದು॥

ಸೂರ್ಯನು ಮುಳುಗಿದರೆ ಹೀಗೆ
ನಾನಂತೂ ತಾಳಲಾರೆ ಅವನ ಬೇಗೆ
ಕಾಪಾಡು ನನ್ನನು ಎಂದು ಕಿರಚುತ
ಓಡಿ ಬಂತು ಅಲೆಯು ಹೆದರುತ ॥

ಹಿಂದೆಯೇ ಬಂತೊಂದು  ಅಲೆಯು ಕುಣಿಯುತ
ಹಾಗೆಯೇ ತನ್ನ ಸೊಂಟವ ಬಳಕುತ
ಹೇಳಿತು ನೋಡಲ್ಲಿ ಬಂದಿರುವನು ನನ್ನ ನಲ್ಲ
ಎಷ್ಟು ಚಂದ ಅವನ ಹಾಲು ಮುಖದ ಗಲ್ಲ ॥

ಎಷ್ಟೊಂದು ಭಿನ್ನ ಒಂದೊಂದು ಅಲೆಯ ಯೋಚನೆ
ಆಶಾವಾದ ನಿರಾಶಾವಾದದ ಕಲ್ಪನೆ
ಏಕಿಷ್ಟು ಕವಲು ಅವನ ಈ ಸೃಷ್ಟಿಯಲ್ಲಿ
ಎಲ್ಲರ ಬದುಕು ನಡೆದಿದೆ ಅವರವರ ದೃಷ್ಟಿಯಲ್ಲಿ

--
ಗುರುರಾಜ 

ಸೋಮವಾರ, ಮೇ 6, 2013

ಆ ಒಂದು ಕರೆ...



ಸಿಹಿ ನಿದಿರೆಯಲಿ ಜಾರಿದಾಗ
ಬಂದಿತೊಂದು ಕರೆ
ಸಿಹಿಯಾದ ಆ ಧನಿಯ ಕೇಳಿದಾಗ
ಎದ್ದು ಕುಳಿತೆ ಖರೆ॥

ಪದಗಳವು  ಜೇನಿನಂತೆ
ಕಿವಿಯೊಳಗೆ ಇಳಿಯುತಿರಲು ಹಾಗೆ
ಸತ್ತ ಹೃದಯವಿದು
ಏಕೋ ಕುಣಿಯುತಿದೆ ಹೀಗೆ ॥

ಅಕ್ಷರಗಳ ಜೋಡಣೆಯಲಿ
ಅವಳದೇ ವಿಭಿನ್ನತೆ
ಮಾತುಗಳ ಮಧ್ಯದಲಿ
ಮುಗುಳ್ನಗೆಯ ಮುಗ್ದತೆ ॥

ಯಾವ ಜನ್ಮದ ಅದೃಷ್ಟವೋ
ಕರಣಕೆ ಇಂದು
ತನ್ನ ಪಾಪವನೆಲ್ಲ ತೊಳೆದ ಹಾಗೆ
ಗಂಗೆಯಲಿ ಮಿಂದು॥

ಕರೆ ಮಾಡಿದ ಉದ್ದೇಶವದು
ಮಾರಲು ನನಗೆ ಸಾಲದ ಚೀಟಿ
ಏನು ಮಾಡಲಿ  ನಾನು ಕಾಸಿಲ್ಲ
ಬೇಡವೆಂದೆ ಹೃದಯವನು ಚಿವುಟಿ॥
--
ಗುರುರಾಜ