ಪುಟಗಳು

ಶನಿವಾರ, ಏಪ್ರಿಲ್ 20, 2013

ನಾಲ್ಕು ತಿಂಗಳು..(ಒಂದು ಕಥೆ)

(ಪ್ರಸ್ತುತ )

"ಸಂಜಯ್ ... ನಾನು ನಿಮ್ ರಕ್ತನ ಅವ್ರ ಅಮ್ಮಂಗೆ ಕೊಡೋಕ್ಕಾಗಲ್ಲ" ಎಂದು ಹೇಳಿ ಆ ಕಾಗದದ ತುಂಡನ್ನು
ಮೇಜಿನ ಮೇಲೆ ಇಟ್ಟು ಮೆಲ್ಲಗೆ ಉಸಿರು ಬಿಡುತ್ತ ಕುರ್ಚಿಯ ಮೇಲೆ ಕುಳಿತು ಕೊಂಡ ಡಾಕ್ಟರ್,  ಸಂಜಯನ ಸ್ನೇಹಿತನ ಕಡೆಗೊಮ್ಮೆ ದೃಷ್ಟಿ ಹಾಯಿಸಿದರು.
"ಡಾಕ್ಟ್ರೆ!!! ಯಾಕೆ ?? ಏನಾಯ್ತು...  ನಂದು ಬ್ಲಡ್ ಗ್ರೂಪ್  B+Ve ತಾನೆ"  ಎಂದು ಸ್ವಲ್ಪ ಜೋರಾದ ಕಂಠದಲ್ಲಿ ಕೇಳಿದ ಸಂಜಯ್.
"ಸಂಜಯ್ ರಿಲಾಕ್ಸ್!!!"ಎಂದವರು  ಸ್ವಲ್ಪ ಹೊತ್ತಿನ ಮೌನದ ನಂತರ "ನೀವು ಸ್ವಲ್ಪ ಧೈರ್ಯ ತಗೊಳ್ಬೇಕು!!!" ಎಂದು ಮತ್ತೆ ಮೌನಕ್ಕೆ ಶರಣಾದರು.
ಸಂಜಯನ ಎದೆ ಬಡಿತ ಆ ಕ್ಷಣವೇ ಉತ್ತುಂಗಕ್ಕೆ ಏರಿತು. ಏನು ತೋಚದಂತಾಗಿ ಮತ್ತೊಮ್ಮೆ ಜೋರಾಗಿ ಕೇಳಿದ
"ಅಂತದ್ದು ಏನಾಗಿದೆ ಡಾಕ್ಟ್ರೆ!!!!".
"ಇಟ್ಸ್ ಲೂಕೆಮಿಯ..... ಅಂದ್ರೆ ಸಾಮಾನ್ಯ ಮನುಷ್ಯನ ಭಾಷೆಯಲ್ಲಿ ಬ್ಲಡ್ ಕ್ಯಾನ್ಸರ್ " ಎಂದು ಡಾಕ್ಟರ್ ಸಂಜಯನ ಬಳಿ ಬಂದರು.
ಆ ಮಾತನ್ನು ಕೇಳಿದೊಡನೆಯೇ ಅಲ್ಲೇ ಕಣ್ಣ ಮುಂದೆ ಕತ್ತಲಾವರಿಸಿ ಜೊತೆಯಲ್ಲೇ ಇದ್ದ ಸ್ನೇಹಿತನ ಮೇಲೆ ತಲೆ ಸುತ್ತಿ ಬಿದ್ದನು.
ಅವನ್ನನ್ನು ಹಿಡಿದು ಮೆಲ್ಲಗೆ ಕುರ್ಚಿಯ ಮೇಲೆ ಕೂರಿಸಿ ,ಮುಖಕ್ಕೆ ನೀರನ್ನೆರಚಿದರು.
ಹಾಗೆ ಕಣ್ಣ ಬಿಡುತ್ತ ಸಂಜಯ್ ಮುಖವನ್ನೋರಸಿಕೊಂಡು ಸ್ವಲ್ಪ ಹೊತ್ತು ಮೌನಕ್ಕೆ ಶರಣಾದನು.
ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡು ,"ಡಾಕ್ಟ್ರೇ , ಇನ್ನು ಎಷ್ಟು ಸಮಯ ಇದೆ ನನ್ನ ಹತ್ತಿರ" ಎಂದನು.

ಡಾಕ್ಟರ್ "ಇನ್ನು ಹೆಚ್ಚೆಂದರೆ ನಾಲ್ಕು ತಿಂಗಳು" ಎಂದರು".


(ಎರಡು ಘಂಟೆಯ ಮುಂಚೆ )
ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸಂಜಯನಿಗೆ, ಒಂದು ಕರೆ ಬಂದಿತ್ತು . ಮೊಬೈಲ್ ನಲ್ಲಿ ಅವಳ ಹೆಸರ ನೋಡುತ್ತಿದಂತೆಯೇ ಏನೋ ಒಂದು ರೀತಿಯಾದಂತ ಖುಷಿ ಅವನಲ್ಲಿ ಮನೆ ಮಾಡಿತು.
ಕೂಡಲೇ ಕರೆ ಸ್ವೀಕರಿಸಿ "ಹಲೋ ಸಂಗೀತ!! ಹೇಗಿದ್ದೀಯ ಏನು ಇದ್ದಕಿದ್ದ ಹಾಗೆ ಫೋನ್ ಮಾಡಿದ್ದೀಯ".
ಅವಳು "ಸಂಜಯ್ !! ನಿನ್ನ ಹತ್ರ ನಾನು ಸ್ವಲ್ಪ ಮಾತಾಡ್ಬೇಕು... ಎಲ್ಲಾದರು ಸಿಗ್ತಿಯ".
"ಆಯ್ತು ರೀ !!! ನಾವ್ ಮೀಟ್ ಮಾಡ್ತಿದ್ದ ಪಾರ್ಕಿಗೆ ಬರ್ತೀನಿ ಇನ್ನು ಅರ್ಧ ಗಂಟೇಲಿ "ಎಂದನು.
ಅವಳು"ಅಯ್ತು" ಎಂದು ಫೋನ್ ಇಟ್ಟಳು.
(ಪಾರ್ಕಿನಲ್ಲಿ )
"ಹಾಯ್ ಸಂಗೀತ !! ಸಾರೀ ರೀ ... ಸ್ವಲ್ಪ ಲೇಟ್ ಆಯ್ತು!! ಏನ್ ವಿಷ್ಯ ... ಇಷ್ಟೊಂದು ಆತುರದಲ್ಲಿ ಫೋನ್ ಮಾಡಿದ್ರಿ " ಎಂದು ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದನು.
ಅವಳು ಹಾಗೆಯೇ ನಾಚಿ ನೀರಾಗಿ ಒಂದು ಕ್ಷಣ ಮೌನದ ನಂತರ "ಏನಿಲ್ಲ... ನೀವು ಆ ದಿನ ನನಗೆ ನನ್ನನ್ನ ಮದುವೆ ಆಗುತ್ತಿಯ ?? ಎಂದು ಕೇಳಿದ್ರಲ್ಲ .. ಅದಕ್ಕೆ ಉತ್ತರ ಕೊಡೋಣ ಅಂತ ಬಂದೆ".
ಇದನ್ನು ಕೇಳಿದ ತಕ್ಷಣ ಏನೋ ಒಂದು ಆತಂಕ ಮತ್ತು ಉತ್ಸಾಹ ಅವನಲ್ಲಿ ಮನೆ ಮಾಡಿ "ಹೇಳಿ ಏನ್ ಅಂತ ಯೋಚನೆ ಮಾಡಿದ್ದೀರಾ???!!!" ಎಂದನು.
ಅದಕ್ಕೆ ಪ್ರತ್ಯುತ್ತರವಾಗಿ "ನೀವೇ ನನಗೆ ಸರಿ ಅಂತ ನಿರ್ಧಾರ ಮಾಡಿದ್ದೀನಿ" ಅನ್ನಲು ಅವನಿಗೆ ಏನು ಮಾಡಲು ತಿಳಿಯದೆ
ಒಮ್ಮೆ ಜೋರಾಗಿ "ಥ್ಯಾಂಕ್ಸ್!!!!!!!ಸಂಗೀತ "ಎಂದು ಕಿರುಚಿದನು.
ಅವಳು ಅವನನ್ನು ಸಂಭಾಳಿಸುತ್ತ "ಆದರೆ ನಮ್ಮ ಮನೆಯಲ್ಲಿ ಎಲ್ಲರನ್ನು ಒಪ್ಪಿಸಲು ಸ್ವಲ್ಪ ಸಮಯ ಬೇಕಾಗ ಬಹುದು" ಎಂದಳು .
ಅವನು"ಪರವಾಗಿಲ್ಲ ಎಷ್ಟು ಸಮಯ ಬೇಕಾದ್ರೂ ತಗೊಳ್ರಿ .. ನೀವ್ ಸಿಗ್ತೀರ ಅಂದ್ರೆ ಎಷ್ಟು ಜನ್ಮ ಬೇಕಾದ್ರೂ ಕಾಯ್ತೀನಿ..
ಅಂದಾಜು ಎಷ್ಟು ಸಮಯ ಬೇಕಾಗ ಬಹುದು ಹೇಳ್ರಿ ... ಸುಮ್ನೆ ಕುತೂಹಲ".
ಅವಳು " ಏನಿಲ್ಲ ಅಂದ್ರು ನಾಲ್ಕು ತಿಂಗಳು ಬೇಕು" ಎಂದಳು.
--
ಗುರುರಾಜ 

ಮರಳಿ ಬಾ ಯೋಧ ಗೂಡಿಗೆ



ಮನೆಯ ಅಂಗಳವದು
ನಿನ್ನ ಕೀಟಲೆಯ ಕಾಣಲು ಕಾದಿರುವಾಗ
ನಿನ್ನ ತಂಗಿಯ ಮೂಗದು
ಸುಮ್ಮನೆ ಕೋಪಗೊಳ್ಳಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ತಂಗಿಯ ಕೆಣಕದೆ ॥

ಊರಿನ ಜಗುಲಿಯ ಕಟ್ಟೆಯದು
ನಿನ್ನ ತುಂಟ ಮಾತನು ಕೇಳಲು ಕಾದಿರುವಾಗ
ನಿನ್ನ ಗೆಳೆಯನ ಬಾಯದು
ನಿನ್ನ ಬೈಯ್ಯಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ಗೆಳೆಯನ ಕಾಲೆಳೆಯದೆ॥

ಗೌಡರ ಗೆದ್ದೆಯದು
ನಿನ್ನ ರಸಿಕತೆಯ ಕಾಣಲು ಕಾದಿರುವಾಗ
ಗೌಡರ ಮಗಳ ತುಟಿಯದು
ನಾಚಿ ನೀರಾಗಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ಪ್ರೇಯಸಿಗೆ ಮುತ್ತಿಕ್ಕದೆ ॥

ಒಲೆಯ ಮೇಲಿರುವ ಅಂಬಲಿ
ನಿನ್ನ ತಣಿಸಲು ಕಾದಿರುವಾಗ
ನಿನ್ನ ತಾಯಿಯ  ಕೈಯದು
ತುತ್ತನಿಕ್ಕಲು  ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನೆತ್ತವಳ ಮಡಿಲ ಸೇರದೆ॥

---
ಗುರುರಾಜ