ಪುಟಗಳು

ಗುರುವಾರ, ಫೆಬ್ರವರಿ 21, 2013

ಶರಣು ಯೋಧ




ಬಿಸಿಲು ಮಳೆ ರಾತ್ರಿ ಹಗಲೆನ್ನದೆ
ಯಾವ ಶತ್ರುವಿಗೂ ಜಗ್ಗದೆ 
ಭಾರತಾಂಬೆಗೆ ಮುಡಿಪಾಗಿದೆ ನಿನ್ನೆದೆ 
ಹೇಗೆ ಇರಲು ಸಾಧ್ಯ ನಿನಗೆ ಶರಣು ಎನ್ನದೆ॥

ಮೌನ ತಬ್ಬಿದ ಮಂಜಿನಲಿ
ಕ್ಷಣಕ್ಷಣವು ಕೇಳುವ ಗುಂಡಿನ ಸದ್ದಿನಲಿ
ಶತ್ರು ನಾಶದ ಗುಂಗಿನಲಿ
ಘರ್ಜಿಸುವ ನೀನೆ ನಿಜವಾದ ಗಂಡುಗಲಿ॥

ಸಾರಥಿಯೇ ಇಲ್ಲದ ಪಾರ್ಥ
ಅವಳಿಗೆ ನಿನ್ನ ಸೇವೆಯು ನಿಸ್ವಾರ್ಥ
ನಿನ್ನ ಬದುಕಿಗಿದೆ ಸಾವಿರ ಅರ್ಥ
ನಿನ್ನ ಗೌರವಿಸದಿರೆ ನಾವು ಸಾವಿಗೂ ಅಸಮರ್ಥ॥

ನಿನ್ನ ಹೆಸರು ಕೇಳಿದರೆ ಶತ್ರುವಿಗೆ ನಡುಕ
ನಿನ್ನೆದುರು ಸಿಕ್ಕರೆ ಅವನ ಜೀವನ ಕ್ಷಣಿಕ
ಸಾಹಸ ಗುಂಡಿಗೆಯಲಿ ನೀನೆ ಧನಿಕ
ನಿನ್ನ ನೆನೆಯಲು ಮನಸಲ್ಲಿ ಏನೋ ಪುಳಕ॥

ಭವ್ಯ ಭಾರತದ ಕನಸು ಹೊತ್ತು ಆ ದಿನ
ತಾಯಿ ಮುಡಿಪಿಟ್ಟಳು ಅವಳ  ಈ ಕಂದನ
ನಿನ್ನಿಂದಲೆ ಬೆಳಕು ಕಾಣುತ್ತಿದೆ ಹಲವು ಜೀವನ
ಸೈನಿಕನೆ ನಿನಗೀ  ನಾಗರಿಕನ ನಮನ॥
---
ಗುರುರಾಜ 

ಬುಧವಾರ, ಫೆಬ್ರವರಿ 13, 2013

ಒಂದು ಸಣ್ಣ ಕಥೆ -೬

ನನ್ನ ಮಗ ದೊಡ್ಡವನಾದ ಮೇಲೆ ಕಾರಿನೊಳಗೆ ಕೂಡಿಸಿ 
ಊರೆಲ್ಲ ಸುತ್ತಿಸುವನೆಂದು ಕನಸು ಕಾಣುತ್ತ ಫುಟ್ ಪಾತ್  ಬಳಿಯಲ್ಲಿ 
ಮಲಗಿದ್ದವನ ಮೇಲೆ ಕಾರು ಹರಿದು ಸಾವನ್ನಪ್ಪಿದ.
--
ಗುರುರಾಜ 

ಮಂಗಳವಾರ, ಫೆಬ್ರವರಿ 12, 2013

ಅಮ್ಮಾ !!!



ಎಲ್ಲೋ ಸುಮ್ಮನೆ ಮಲಗಿದ್ದ ನನ್ನ ಆತ್ಮ
ಜೋರಾಗಿ ಕೂಗಿ ಕರೆದನಾ ಬ್ರಹ್ಮ
ನಿನಾಗಾಗಿ ಕಾಯುತ್ತಿರುವಳು ನಿನ್ನ ಅಮ್ಮ
ಕೊಡಲು ನಿನಗೆ  ಮಾನುಷ ಜನ್ಮ ॥

ಅವನಾಜ್ಞೆಯಂತೆ ಬಿದ್ದೆ ಇವಳ ಮಡಿಲಿನಲಿ
ಎಂದಿಗೂ ಬತ್ತದ ವಾತ್ಸಲ್ಯದ ಕಡಲಿನಲಿ
ಹಾಲಾಮೃತವ ಉಣಿಸಿದಳು  ನಲಿವಿನಲಿ
ನನ್ನ ನೋಡುತ ಅವಳೆಲ್ಲ ನೋವನು ಮರೆಯುತಲಿ॥

ಚಂದಿರನ ತೋರಿಸಿ ತುತ್ತನು ಎಣಿಸುತ
ಬಾಯಿಗೆ ಇಟ್ಟಳು ಆನೆ ಬಾಯಿ ತೆರೆಸುತ
ಚೇಷ್ಟೆಗಳ ಮಾಡಿದರೆ ಕಿವಿಯನು ಹಿಂಡುತ
ಸುಮ್ಮನೆ ಹೆದರಿಸಿದಳು ಅಪ್ಪನ ಕರೆಯುತ॥

ಅಕ್ಷರಮಾಲೆಯ ತಲೆಗೇರಿಸಿದವಳು
ಸರಿ ತಪ್ಪೆಂಬ ವ್ಯತ್ಯಾಸವ ತಿಳಿಸಿದವಳು
ಬೇಕೆಂಬ ಹೊತ್ತಿಗೆ ಮೃಷ್ಟಾನ್ನವ ಬಡಿಸಿದವಳು
ನಾನೇ ಅವಳ ದೇವರೆಂಬಂತೆ ಬೆಳೆಸಿದವಳು॥

ಆ ಮಾತೆಯ ಋಣವ ನಾನೆಂದು ತೀರಿಸಲಾರೆ
ಅವಳ ಪ್ರೀತಿಯ ನಾನೆಂದು ಮೀರಿಸಲಾರೆ
ಮಾತೃ ಬಾಂಧವ್ಯದ ಚಕ್ರವ್ಯೂಹವನೆಂದು ಭೇದಿಸಲಾರೆ
ಅಮ್ಮಾ !! ನಿನಗಾಗಿ ಮುಡಿಪು ಈ ಸಣ್ಣ ಕಾವ್ಯಧಾರೆ॥
---
ಗುರುರಾಜ 

ಮಂಗಳವಾರ, ಫೆಬ್ರವರಿ 5, 2013

ಒಂದು ಸಣ್ಣ ಕಥೆ ೫

ದೇವರೇ ನೀನೆ ಗತಿ ಎಂದು ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿದ್ದ
ಪೂಜಾರಪ್ಪ ರಾಮಶಾಸ್ತ್ರಿಯ  ಮಗಳು ಇಂದು ಯಾವುದೋ ಹುಡುಗನ ಜೊತೆ
ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾದಳಂತೆ..
---
ಗುರುರಾಜ

ಒಂದು ಸಣ್ಣ ಕಥೆ - ೪

ಕೆಲಸ ಸಿಗದ ಬೇಸರದಲ್ಲಿ ಒಬ್ಬನೇ ಪಾರ್ಕಿನಲ್ಲಿ ಕುಳಿತ್ತಿದ್ದಾಗ
ಭಿಕ್ಷುಕನೊಬ್ಬ ಬಂದು "ಅಣ್ಣ ಏನಾದ್ರು ಇದ್ರೆ.....ಕೊಡಣ್ಣ " ಎನ್ನಲು
ಆ ವಿಧಿಯೇ ನನ್ನನ್ನು ಕುಹುಕ ಮಾಡಿದಂತೆ ಆಭಾಸವಾಯಿತು...
--
ಗುರುರಾಜ