ಪುಟಗಳು

ಶನಿವಾರ, ಜನವರಿ 26, 2013

ಮುದುಡಿದ ಕನಸು



ಸಂಜೆಯ ಕಿರುಬೆರಳು ರಾತ್ರಿಯನು ತಾಕಲು
ರಾತ್ರಿಯು ಕೋಪದಿ ಬೆಳಕನು ಕರೆದಿರಲು
ಬೆಳಕು ಉತ್ಶಾಹದಿ ಚಿಮ್ಮುತ ಬರುತಿರಲು
ಬಂದೊಡನೆಯೇ ಕಣ್ಣ ರೆಪ್ಪೆಯ ಕೆಣಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ಮಾಘದ ಗಾಳಿಯು ಜೋರಾಗಿ ಬೀಸಲು
ಬೆಟ್ಟವು ಆಹ್ಲಾದದಿ ತಲೆಯ  ತೂಗಿರಲು
ಅರ್ಧ ತುಂಬಿದ ಮೋಡವು ತಾನಾಗಿ ಕುಲಕಲು
ಆ ಒಂದು ಹನಿಯು ಕಣ್ಣ ರೆಪ್ಪೆಯ  ತಾಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ತಾರೆಗಳೂರಿನ ಬಾನ ತೋಟವ ಕಾಯಲು
ರವಿಯ ನಂತರ ಚಂದಿರನ ಸರದಿ ಬಂದಿರಲು
ಸಾಗರವು ಸಂತಸದಿ ಅಲೆಗಳನು ತೂರಿರಲು
ಅಲೆಗಳದು ಬಂದು ಕಣ್ಣ ರೆಪ್ಪೆಯ ಸೋಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ಊರಿಗೆ ಹೋದವಳು ವಾಪಸ್ಸು ಬಂದಿರಲು
ನಿನ್ನಯ ಮೊಗದಲ್ಲಿ ನಾಚಿಕೆಯು ತುಂಬಿರಲು
ಕಾಲಲ್ಲಿ ನೀನಂದು ರಂಗೋಲಿಯ ಬಿಡುತಿರಲು
ಕಾಲ್ಬೆರಳ ಸಂಧಿಯಲಿ ಕಾಲುಂಗುರ ಕಂಡಾಗ
ನಿನ್ನಯ ಕನಸದು ಅಲ್ಲಿಯೇ ಅಸುನೀಗಿತು ।।
--ಗುರುರಾಜ