ಪುಟಗಳು

ಸೋಮವಾರ, ಡಿಸೆಂಬರ್ 31, 2018

ನನ್ನ ಹೊಸ ವರ್ಷ







ಜಗತ್ತೇ ಮದಿರೆಯ ಗುಂಗಲ್ಲಿ
ಮುಳುಗಿರಲು
ನಾ ಇಂದು ಬರಬೇಕಿದ್ದ 
ಪ್ಲoಬರ್ ರಾಮಣ್ಣ ಯಾಕೆ
ಬರಲಿಲ್ಲ ಎಂದು ಯೋಚಿಸುತ್ತಿದ್ದೆ||

ಹೊಸ ವರುಷದ ನೆಪದಲ್ಲಿ
ಎಲ್ಲರು ರಜೆಯನ್ನು ಸವಿದಿರಲು
ನಾ ಬಟ್ಟೆಗೆ ತಾಕಿದ 
ಕರಿ ಬಣ್ಣದ 
ಕಲೆಯನ್ನ  ತಿಕ್ಕುತ್ತಿದ್ದೆ||

ಕೆಲವರು ಗೋವಾದ ಬೀಚಲ್ಲಿ 
ಬರ್ಮುಡಾ ತೊಟ್ಟು
ಸೆಲ್ಫಿ ತೆಗೆದಿರಲು
ನಾನಿಲ್ಲಿ ಕೇರಳದ ಲುಂಗಿ ತೊಟ್ಟು
ಅಗ್ನಿಸಾಕ್ಷಿ ನೋಡುತ್ತಿದ್ದೆ||

ಎಲ್ಲೆಡೆ ಹರ್ಷದ ಚೀರಾಟ 
ಪಟಾಕಿಗಳ ಶಬ್ಧ ಮುಗಿಲು ಮುಟ್ಟಲು 
ನಾ ಹೊದಿಕೆಯ ಸಂಧಿಯಲ್ಲಿ 
ಸುಯ್ ಎಂದು ಬೀಸುತ್ತಿದ್ದ
ಗಾಳಿಯ ಮೂಲ ಹುಡುಕುತ್ತಿದ್ದೆ ||

ಮಾರನೆಯ ದಿನ ಕುಡಿದ ಮತ್ತಲ್ಲಿ ಬೆಳಗ್ಗೆ
ಕೆಲವರು ಹತ್ತಾದರು ಏಳದಿರಲು 
ನಾ ಆರಕ್ಕೆ ಎದ್ದು ಅದ್ಯಾವುದೊ 
ಬ್ಯಾಂಕಿನ ಕ್ಯಾಲೆಂಡರ್ ಗೋಡೆಗೆ 
ತಗಲಾಕಿ ಹೊಸ ವರ್ಷ ಆಚರಿಸಿದ್ದೆ ||

------
ಗುರುರಾಜ್ ಎಂ ಜೆ 

ಶನಿವಾರ, ಜೂನ್ 2, 2018

ಚಾರಣಿಗ

Image result for trekking perdon

ಸಣ್ಣವನಾಗಿದ್ದಾಗಿಂದಲೂ
ನಿನ್ನ ನೋಡಿದಾಗ ಅನ್ನಿಸುತ್ತಿದದ್ದು
ನಿನ್ನ ಶಿಖರವೊಮ್ಮೆ ಏರಬೇಕು
ಆ ಯಶಸ್ಸಿನ ತುತ್ತ ತುದಿಯಲ್ಲಿ ನಿಂತು
ಜಗತ್ತನ್ನು ಒಮ್ಮೆ ಕಾಣಬೇಕು ।

ಬೆಳೆಯುತ್ತ ಬೆಳೆಯುತ್ತ ಆ ಆಸೆಗಳಿಗೆ
ಒಂದೆರಡು ರೆಕ್ಕೆ ಪುಕ್ಕ ಸೇರಿಸಿ
ಒಂದಿಷ್ಟು ಅಹಂಕಾರದ ಜೊತೆಗೆ ಹುರುಪನ್ನು ಬೆರೆಸಿ
ಚಾರಣ ಮಾಡಲು ಕೊನೆಗೂ
ಚಾರಣಿಗನಾಗಲು ಹೊರಟವ ನಾನು ।

ಒಂದಿಷ್ಟು ದೂರ ಏರಿರಬಹುದೇನೋ
ಅಷ್ಟರಲ್ಲೇ ನನ್ನ ಬಣ್ಣ ಬಯಲಾಯಿತು
ಏದುಸಿರು ತೆಗೆದು ಕೊಳ್ಳಲಾಗದೆ
ಏರಲಾಗದೆ ಇಳಿಯಲಾಗದೆ ಅಲ್ಲೇ ಕೂತಾಗ
ನನಗೆ ಏನೋ ಒಂದು ಸೋಲಿನ ಅನುಭವ ।।

ಆದರೂ ಅಹಂ ನ ಮಾತು ಕೇಳಿ
ಮತ್ತೆ ಏರಲು ಮತ್ತದೇ ಸೋಲಿನ ಪಾಠ
ಕೊನೆಗೆ ಸ್ವಲ್ಪ ಯೋಚಿಸಿದ ಮೇಲೆ
ಅಲ್ಲೇ ಅಹಂಕಾರದ ಮೂಟೆಯನ್ನು
 ಕೆಳಗಿಳಿಸದ ಮೇಲೆ ।

ಏರಿದೆ ಏನೋ ಹೊಸ ಉತ್ಸಾಹದಲಿ
ಶಿಖರವನ್ನು ತಲುಪಿ ನೋಡಲು ಏನೋ ಖುಷಿ
ಸಾಧನೆಯ ಶಿಖರವನ್ನು ತಲುಪಿದ ನಾನು
ಚಾರಣಿಗ ಇರಬಹುದು
ಆದರೂ ನನ್ನವರನ್ನೆಲ್ಲ ಹಿಂದೆ ಬಿಟ್ಟು
ಮೇಲೆ ಬಂದ ನಾನು ಇಂದು ಒಬ್ಬ ಒಬ್ಬಂಟಿಗ ।।

--
ಗುರುರಾಜ ಎಂ ಜೆ

ಶನಿವಾರ, ಮಾರ್ಚ್ 17, 2018

ಮತ್ತೆ ಕವಿಯಾಗಿರುವೆ

Image result for poet

ಧೂಳಿಡಿದ ಸ್ಫೂರ್ತಿಗಳ ಧೂಳೆಬ್ಬಿಸಿ
ಸ್ವಲ್ಪ ನೀರೆರೆಚಿ ಚೊಕ್ಕ ಮಾಡಿ
ಇಂದು ಮತ್ತೆ ಕವಿಯಾಗಿರುವೆ।

ನಾ ಬರೆದ ಸಾಲುಗಳೇ ನನ್ನ ಕೂಗಿದಾಗ
ನಾವಿಲ್ಲಿ ಒಂಟಿ ಬೇಗ ಬಾ ಎಂದಾಗ ಬಂದವನು
ಇಂದು ಮತ್ತೆ ಕವಿಯಾಗಿರುವೆ ।।

ಅದೆಷ್ಟೋ ಅನುಭವಗಳು ಹೆಗಲನೇರಿ ಭಾರವಾಗಿ
ಪದಗಳ ಮೂಲಕ ಭಾರ ಇಳಿಸಲು
ಇಂದು ಮತ್ತೆ ಕವಿಯಾಗಿರುವೆ।

 ಮೂಲೆಯಲ್ಲಿ ಇದ್ದ ಸಣ್ಣ ಜೋಳಿಗೆಯನ್ನು ಹೆಗಲಿಗೇರಿಸಿ
ಕೆದರಿದ ಕೂದಲು ಸರಿ ಮಾಡಿಕೊಂಡು
 ಅಲ್ಲಲ್ಲಿ ಅವಿತ ಬಿಳಿ ಕೂದಲಿನ ಕುರುಚಲು ಗಡ್ಡ ಕೆರೆಯುತ
ಇಂದು ಮತ್ತೆ ಕವಿಯಾಗಿರುವೆ ।।

ಇಂದು ಮತ್ತೆ ಕವಿಯಾಗಿರುವೆ
ಕನ್ನಡಕ್ಕೆ ಸಣ್ಣ ಮಟ್ಟದ ಸೇವಕನಾಗಿರುವೆ ।।
--
ಗುರುರಾಜ್