ಪುಟಗಳು

ಶನಿವಾರ, ಜೂನ್ 2, 2018

ಚಾರಣಿಗ

Image result for trekking perdon

ಸಣ್ಣವನಾಗಿದ್ದಾಗಿಂದಲೂ
ನಿನ್ನ ನೋಡಿದಾಗ ಅನ್ನಿಸುತ್ತಿದದ್ದು
ನಿನ್ನ ಶಿಖರವೊಮ್ಮೆ ಏರಬೇಕು
ಆ ಯಶಸ್ಸಿನ ತುತ್ತ ತುದಿಯಲ್ಲಿ ನಿಂತು
ಜಗತ್ತನ್ನು ಒಮ್ಮೆ ಕಾಣಬೇಕು ।

ಬೆಳೆಯುತ್ತ ಬೆಳೆಯುತ್ತ ಆ ಆಸೆಗಳಿಗೆ
ಒಂದೆರಡು ರೆಕ್ಕೆ ಪುಕ್ಕ ಸೇರಿಸಿ
ಒಂದಿಷ್ಟು ಅಹಂಕಾರದ ಜೊತೆಗೆ ಹುರುಪನ್ನು ಬೆರೆಸಿ
ಚಾರಣ ಮಾಡಲು ಕೊನೆಗೂ
ಚಾರಣಿಗನಾಗಲು ಹೊರಟವ ನಾನು ।

ಒಂದಿಷ್ಟು ದೂರ ಏರಿರಬಹುದೇನೋ
ಅಷ್ಟರಲ್ಲೇ ನನ್ನ ಬಣ್ಣ ಬಯಲಾಯಿತು
ಏದುಸಿರು ತೆಗೆದು ಕೊಳ್ಳಲಾಗದೆ
ಏರಲಾಗದೆ ಇಳಿಯಲಾಗದೆ ಅಲ್ಲೇ ಕೂತಾಗ
ನನಗೆ ಏನೋ ಒಂದು ಸೋಲಿನ ಅನುಭವ ।।

ಆದರೂ ಅಹಂ ನ ಮಾತು ಕೇಳಿ
ಮತ್ತೆ ಏರಲು ಮತ್ತದೇ ಸೋಲಿನ ಪಾಠ
ಕೊನೆಗೆ ಸ್ವಲ್ಪ ಯೋಚಿಸಿದ ಮೇಲೆ
ಅಲ್ಲೇ ಅಹಂಕಾರದ ಮೂಟೆಯನ್ನು
 ಕೆಳಗಿಳಿಸದ ಮೇಲೆ ।

ಏರಿದೆ ಏನೋ ಹೊಸ ಉತ್ಸಾಹದಲಿ
ಶಿಖರವನ್ನು ತಲುಪಿ ನೋಡಲು ಏನೋ ಖುಷಿ
ಸಾಧನೆಯ ಶಿಖರವನ್ನು ತಲುಪಿದ ನಾನು
ಚಾರಣಿಗ ಇರಬಹುದು
ಆದರೂ ನನ್ನವರನ್ನೆಲ್ಲ ಹಿಂದೆ ಬಿಟ್ಟು
ಮೇಲೆ ಬಂದ ನಾನು ಇಂದು ಒಬ್ಬ ಒಬ್ಬಂಟಿಗ ।।

--
ಗುರುರಾಜ ಎಂ ಜೆ

ಶನಿವಾರ, ಮಾರ್ಚ್ 17, 2018

ಮತ್ತೆ ಕವಿಯಾಗಿರುವೆ

Image result for poet

ಧೂಳಿಡಿದ ಸ್ಫೂರ್ತಿಗಳ ಧೂಳೆಬ್ಬಿಸಿ
ಸ್ವಲ್ಪ ನೀರೆರೆಚಿ ಚೊಕ್ಕ ಮಾಡಿ
ಇಂದು ಮತ್ತೆ ಕವಿಯಾಗಿರುವೆ।

ನಾ ಬರೆದ ಸಾಲುಗಳೇ ನನ್ನ ಕೂಗಿದಾಗ
ನಾವಿಲ್ಲಿ ಒಂಟಿ ಬೇಗ ಬಾ ಎಂದಾಗ ಬಂದವನು
ಇಂದು ಮತ್ತೆ ಕವಿಯಾಗಿರುವೆ ।।

ಅದೆಷ್ಟೋ ಅನುಭವಗಳು ಹೆಗಲನೇರಿ ಭಾರವಾಗಿ
ಪದಗಳ ಮೂಲಕ ಭಾರ ಇಳಿಸಲು
ಇಂದು ಮತ್ತೆ ಕವಿಯಾಗಿರುವೆ।

 ಮೂಲೆಯಲ್ಲಿ ಇದ್ದ ಸಣ್ಣ ಜೋಳಿಗೆಯನ್ನು ಹೆಗಲಿಗೇರಿಸಿ
ಕೆದರಿದ ಕೂದಲು ಸರಿ ಮಾಡಿಕೊಂಡು
 ಅಲ್ಲಲ್ಲಿ ಅವಿತ ಬಿಳಿ ಕೂದಲಿನ ಕುರುಚಲು ಗಡ್ಡ ಕೆರೆಯುತ
ಇಂದು ಮತ್ತೆ ಕವಿಯಾಗಿರುವೆ ।।

ಇಂದು ಮತ್ತೆ ಕವಿಯಾಗಿರುವೆ
ಕನ್ನಡಕ್ಕೆ ಸಣ್ಣ ಮಟ್ಟದ ಸೇವಕನಾಗಿರುವೆ ।।
--
ಗುರುರಾಜ್

ಬುಧವಾರ, ಫೆಬ್ರವರಿ 22, 2017

ಒಂದು ಸಣ್ಣ ಕಥೆ -೭

ನಮ್ಮಿಬ್ಬರ ನಡುವೆ ಯಾರು ನಿಸ್ವಾರ್ಥಿ ಎಂದು ಇಬ್ಬರು ಬಸ್ ಸ್ಟ್ಯಾಂಡಿನಲ್ಲಿ  ಜಗಳ ವಾಡುತಿದ್ದರು ...ಅಷ್ಟರಲ್ಲೇ ಬಂದಂತ ಬಸ್ಸಿಗೆ ಹತ್ತಲು ಜನರ ನಡುವೆ ನುಗ್ಗಿ ಬಸ್ ಹತ್ತಿ ಸೀಟು ಹಿಡಿದು ಕುಳಿತು ಕೊಂಡರು ... #Shortstory
----------
ಗುರುರಾಜ್

ಮಂಗಳವಾರ, ಜನವರಿ 10, 2017

ಆದರೆ.. ಮತ್ತೊಮ್ಮೆ ಸಿಗುವಆದರೆ..  ಮತ್ತೊಮ್ಮೆ ಸಿಗುವ
ಸಿಕ್ಕಿ ಮತ್ತೊಮ್ಮೆ ನಗುವ


ಅಂಬೆಗಾಲಿಡುತ್ತ
ಹೊಸ್ತಿಲು ದಾಟಬಾರದೆಂದು
ಬಾಗಿಲಿಗೆ ಕಟ್ಟಿದ ಆ ಮರದ
ತಡೆಗೋಡೆಯ ಬಳಿಯಲ್ಲಿ
ಆದರೆ..  ಮತ್ತೊಮ್ಮೆ ಸಿಗುವ
ಸಿಕ್ಕಿ ಮತ್ತೊಮ್ಮೆ ನಗುವ ।।


ಅಲ್ಲೇ ಲಗೋರಿ ಆಡುತ್ತ
ಕಲ್ಲಿನ ಮನೆ ಕಟ್ಟುತ್ತ
ಜೋಕಾಲಿ ಕಟ್ಟಿದ
ಆ ಮರದ ನೆರಳಲ್ಲಿ
ಆದರೆ..  ಮತ್ತೊಮ್ಮೆ ಸಿಗುವ
ಸಿಕ್ಕಿ ಮತ್ತೊಮ್ಮೆ ನಗುವ ।।


ಒಟ್ಟಿಗೆ ನಡೆದಾಡಿ
ಜೇಬಲಿ ಇದ್ದ ೫ ರೂಪಾಯಿಯಲಿ
ಚಿಕ್ಕಿ ಪೆಪ್ಪರ್ ಮಿಂಟು ತಿಂದ
ಆ ಶೆಟ್ಟರ ಅಂಗಡಿಯ ಮುಂದೆ
ಆದರೆ..  ಮತ್ತೊಮ್ಮೆ ಸಿಗುವ
ಸಿಕ್ಕಿ ಮತ್ತೊಮ್ಮೆ ನಗುವ ।।


ಹೀಗೆ ಅದೆಷ್ಟೋ ಚೇಷ್ಟೆಗಳು
ಅದೆಷ್ಟೋ ನಗೆ ಕಂಬನಿಗಳು
 ಮರೆಯದ ಮಾತುಗಳು
ರೋಮಾಂಚನದ ಕ್ಷಣಗಳಿರುವ
ನೆನಪಿನಂಗಳದಲಿ
ಆದರೆ..  ಮತ್ತೊಮ್ಮೆ ಸಿಗುವ
ಸಿಕ್ಕಿ ಮತ್ತೊಮ್ಮೆ ನಗುವ ।।


ಆದರೆ..  ಮತ್ತೊಮ್ಮೆ ಸಿಗುವ
ಸಿಕ್ಕಿ ಮತ್ತೊಮ್ಮೆ ನಗುವ ।।


-------------------------
ಗುರುರಾಜ್ ಎಂ ಜೆ