
ಧೂಳಿಡಿದ ಸ್ಫೂರ್ತಿಗಳ ಧೂಳೆಬ್ಬಿಸಿ
ಸ್ವಲ್ಪ ನೀರೆರೆಚಿ ಚೊಕ್ಕ ಮಾಡಿ
ಇಂದು ಮತ್ತೆ ಕವಿಯಾಗಿರುವೆ।
ನಾ ಬರೆದ ಸಾಲುಗಳೇ ನನ್ನ ಕೂಗಿದಾಗ
ನಾವಿಲ್ಲಿ ಒಂಟಿ ಬೇಗ ಬಾ ಎಂದಾಗ ಬಂದವನು
ಇಂದು ಮತ್ತೆ ಕವಿಯಾಗಿರುವೆ ।।
ಅದೆಷ್ಟೋ ಅನುಭವಗಳು ಹೆಗಲನೇರಿ ಭಾರವಾಗಿ
ಪದಗಳ ಮೂಲಕ ಭಾರ ಇಳಿಸಲು
ಇಂದು ಮತ್ತೆ ಕವಿಯಾಗಿರುವೆ।
ಮೂಲೆಯಲ್ಲಿ ಇದ್ದ ಸಣ್ಣ ಜೋಳಿಗೆಯನ್ನು ಹೆಗಲಿಗೇರಿಸಿ
ಕೆದರಿದ ಕೂದಲು ಸರಿ ಮಾಡಿಕೊಂಡು
ಅಲ್ಲಲ್ಲಿ ಅವಿತ ಬಿಳಿ ಕೂದಲಿನ ಕುರುಚಲು ಗಡ್ಡ ಕೆರೆಯುತ
ಇಂದು ಮತ್ತೆ ಕವಿಯಾಗಿರುವೆ ।।
ಇಂದು ಮತ್ತೆ ಕವಿಯಾಗಿರುವೆ
ಕನ್ನಡಕ್ಕೆ ಸಣ್ಣ ಮಟ್ಟದ ಸೇವಕನಾಗಿರುವೆ ।।
--
ಗುರುರಾಜ್