ಪುಟಗಳು

ಮಂಗಳವಾರ, ಫೆಬ್ರವರಿ 12, 2013

ಅಮ್ಮಾ !!!



ಎಲ್ಲೋ ಸುಮ್ಮನೆ ಮಲಗಿದ್ದ ನನ್ನ ಆತ್ಮ
ಜೋರಾಗಿ ಕೂಗಿ ಕರೆದನಾ ಬ್ರಹ್ಮ
ನಿನಾಗಾಗಿ ಕಾಯುತ್ತಿರುವಳು ನಿನ್ನ ಅಮ್ಮ
ಕೊಡಲು ನಿನಗೆ  ಮಾನುಷ ಜನ್ಮ ॥

ಅವನಾಜ್ಞೆಯಂತೆ ಬಿದ್ದೆ ಇವಳ ಮಡಿಲಿನಲಿ
ಎಂದಿಗೂ ಬತ್ತದ ವಾತ್ಸಲ್ಯದ ಕಡಲಿನಲಿ
ಹಾಲಾಮೃತವ ಉಣಿಸಿದಳು  ನಲಿವಿನಲಿ
ನನ್ನ ನೋಡುತ ಅವಳೆಲ್ಲ ನೋವನು ಮರೆಯುತಲಿ॥

ಚಂದಿರನ ತೋರಿಸಿ ತುತ್ತನು ಎಣಿಸುತ
ಬಾಯಿಗೆ ಇಟ್ಟಳು ಆನೆ ಬಾಯಿ ತೆರೆಸುತ
ಚೇಷ್ಟೆಗಳ ಮಾಡಿದರೆ ಕಿವಿಯನು ಹಿಂಡುತ
ಸುಮ್ಮನೆ ಹೆದರಿಸಿದಳು ಅಪ್ಪನ ಕರೆಯುತ॥

ಅಕ್ಷರಮಾಲೆಯ ತಲೆಗೇರಿಸಿದವಳು
ಸರಿ ತಪ್ಪೆಂಬ ವ್ಯತ್ಯಾಸವ ತಿಳಿಸಿದವಳು
ಬೇಕೆಂಬ ಹೊತ್ತಿಗೆ ಮೃಷ್ಟಾನ್ನವ ಬಡಿಸಿದವಳು
ನಾನೇ ಅವಳ ದೇವರೆಂಬಂತೆ ಬೆಳೆಸಿದವಳು॥

ಆ ಮಾತೆಯ ಋಣವ ನಾನೆಂದು ತೀರಿಸಲಾರೆ
ಅವಳ ಪ್ರೀತಿಯ ನಾನೆಂದು ಮೀರಿಸಲಾರೆ
ಮಾತೃ ಬಾಂಧವ್ಯದ ಚಕ್ರವ್ಯೂಹವನೆಂದು ಭೇದಿಸಲಾರೆ
ಅಮ್ಮಾ !! ನಿನಗಾಗಿ ಮುಡಿಪು ಈ ಸಣ್ಣ ಕಾವ್ಯಧಾರೆ॥
---
ಗುರುರಾಜ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ