
ಹಾಗೆ ಸುಮ್ಗೆ ನಡ್ಕೊಂಡ್ ಬಂದೆ
ಅಕಾಶ್ದ ಕೆಳಗೆ ಮೆಲ್ಗೆ
ಸುಸ್ತಾಗೊಯ್ತು ಮಲ್ಕೊಂಡ್ ಬಿಟ್ಟೆ
ಭೂಮಿ ಮೇಲೆ ಹಂಗೆ॥
ಹಾಗೆ ತಣ್ಣಗ್ ಗಾಳಿ ಬೀಸ್ತು
ನಿದ್ದೆ ಮಾಡ್ದೆ ಅಲ್ಲೆ
ಹಿಂದಿಂದೇನೆ ಬಂದೆ ಬಿಟ್ಲು
ಕನಸಲ್ ನನ್ ನಲ್ಲೆ॥
ಏನ್ ಅಂದ ಏನ್ ಚಂದ
ಹೇಳೋದ್ ವಸಿ ಕೇಳಿ
ಅವಳ್ ಗಿಂತ ಚಂದ ಹುಡ್ಗಿ ಸಿಕ್ಕರೆ
ಬಿರ್ರನೆ ಬಂದು ಹೇಳಿ॥
ಅವಳ್ ಅಂಗೆ ನಕ್ಕ್ ಬಿಟ್ರಂತು
ಬರಗಾಲ್ದಲ್ಲೂ ಸುಗ್ಗಿ
ತಿರ್ಗಿ ಕಣ್ಣ ಹೊಡ್ದು ಬಿಟ್ರೆ
ಮರಿದೆ ಇರ್ತದ ಮಗ್ಗಿ ॥
ಬಂಡೆಗಲ್ ನು ಮಾತಾಡ್ ಸ್ತಾಳೆ
ಅಂತ ಮಾತಿನ ಮಲ್ಲಿ
ಊರ್ ತುಂಬಾ ಓಡಾಡ್ ತಾಳೆ
ತುಂಟ ನಗೆಯ ಚೆಲ್ಲಿ ॥
ನಂಗೆ ಅವ್ಳು ಸಿಗ್ಲಿ ಅಂತ
ದ್ಯಾವರನ್ನ ಬೇಡ್ಕೊಂಡ್ ಬಿಟ್ಟೆ
ನೂರೊಂದ್ ತೆಂಗಿನ ಕಾಯಿ ಹರಕೆ
ಜೊತಗೆ ಬೆಳ್ಳಿ ತಟ್ಟೆ ॥
ದ್ಯಾವ್ರಿಗ್ಯಾಕೋ ಕೋಪ ಬಂತು
ಭೂಮಿಗೆ ಬರ್ತಾ ಅವ್ನೆ
ಯಾಕೋ ಸುಮ್ಗೆ ದಿಗ್ಲ್ ಹತ್ಕೊಂತು
ಏನ್ ಕಾದಿದ್ಯೋ ಶಿವನೆ ॥
ದಿಕ್ಕೇ ಇಲ್ಲದ್ ಪರದೇಸಿ ನೀನು
ಯಾಕೋ ಪ್ರೀತಿ ಪಾಠ
ಬಡವ ನೀನು ಮಡಗ್ದಂಗಿರು
ಅಂತ ಹೋಗೆ ಬಿಟ್ಟ ॥
ಕ್ಷಮಿಸು ದೇವ ತಪ್ಪಾಗೋಯ್ತು
ಇನ್ನು ಹುಡ್ಗನ್ ವಯಸ್ಸು
ಅಂತ ಅಂಗೆ ಕಣ್ಣ ಬಿಟ್ಟೆ
ಮುಗಿತು ತಿರಕನ ಕನಸು॥
--
ಗುರುರಾಜ