ಪುಟಗಳು

ಶನಿವಾರ, ಏಪ್ರಿಲ್ 20, 2013

ಮರಳಿ ಬಾ ಯೋಧ ಗೂಡಿಗೆ



ಮನೆಯ ಅಂಗಳವದು
ನಿನ್ನ ಕೀಟಲೆಯ ಕಾಣಲು ಕಾದಿರುವಾಗ
ನಿನ್ನ ತಂಗಿಯ ಮೂಗದು
ಸುಮ್ಮನೆ ಕೋಪಗೊಳ್ಳಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ತಂಗಿಯ ಕೆಣಕದೆ ॥

ಊರಿನ ಜಗುಲಿಯ ಕಟ್ಟೆಯದು
ನಿನ್ನ ತುಂಟ ಮಾತನು ಕೇಳಲು ಕಾದಿರುವಾಗ
ನಿನ್ನ ಗೆಳೆಯನ ಬಾಯದು
ನಿನ್ನ ಬೈಯ್ಯಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ಗೆಳೆಯನ ಕಾಲೆಳೆಯದೆ॥

ಗೌಡರ ಗೆದ್ದೆಯದು
ನಿನ್ನ ರಸಿಕತೆಯ ಕಾಣಲು ಕಾದಿರುವಾಗ
ಗೌಡರ ಮಗಳ ತುಟಿಯದು
ನಾಚಿ ನೀರಾಗಲು ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನ ಪ್ರೇಯಸಿಗೆ ಮುತ್ತಿಕ್ಕದೆ ॥

ಒಲೆಯ ಮೇಲಿರುವ ಅಂಬಲಿ
ನಿನ್ನ ತಣಿಸಲು ಕಾದಿರುವಾಗ
ನಿನ್ನ ತಾಯಿಯ  ಕೈಯದು
ತುತ್ತನಿಕ್ಕಲು  ಚಡಪಡಿಸಿದಾಗ
ಎತ್ತ ಹೋದೆಯೋ ಯೋಧ ಇತ್ತ ತಿರುಗದೆ
ನಿನ್ನೆತ್ತವಳ ಮಡಿಲ ಸೇರದೆ॥

---
ಗುರುರಾಜ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ