ಪುಟಗಳು

ಭಾನುವಾರ, ಅಕ್ಟೋಬರ್ 27, 2013

ಮಳೆ


ಬಾನಂಗಳದಿ ಕಪ್ಪು ಛಾಯೆ 
ಮೋಡಗಳಲ್ಲ ಅದು ಸೃಷ್ಟಿಕರ್ತನ ಮಾಯೆ 
ಸಾಲು ಸಾಲಿನಲಿ ಹಿಂದಿಂದೆ ಒಂದೊಂದು 
ನೂಕು ನುಗ್ಗಾಟ ನಡೆಸಿವೆ  ಬಾನಲಿ ಇಂದು।।

ಬಹು ದೂರದಿಂದ ಸಾಗಿ ಬಂದಂತೆ 
ಯಾಕೋ ತೀರ ಸುಸ್ತಾಗಿ ನಿಂತಂತೆ
ಹೊಂಚು ಹಾಕಿದವು ಎಲ್ಲ ಭುವಿಗಿಳಿಯಲು 
ಒಂದೈದು ಕ್ಷಣ ವಿಶ್ರಾಂತಿ ಪಡೆಯಲು।।

ಅದನು ಕಂಡ  ಭೂ ಮಾತೆ ಕರೆಯುತ ಕೈ ಚಾಚಿ 
ಬಾಚಿ ತಬ್ಬಲು ಬಂತು ಮೋಡವದು ತುಸು ನಾಚಿ
ಹನಿಗಳ ಸರಮಾಲೆ ಭುವಿಯತ್ತ ಧುಮುಕುತಲಿ
ಭೂ ರಮೆಯು ಆನಂದದಿ ನಲಿಯುತ ಕುಣಿಯುತಲಿ।।

ಕ್ಷಣದಲ್ಲೇ ಎಲ್ಲೆಲು ಹಸಿರ ಕ್ರಾಂತಿ 
ನೋಡಿದರೆ ಸಾಕು ನಯನಕೆ ಶಾಂತಿ 
ಭೂ ಮಾತೆಯೇ ನಿನಗೆ ತಾಕುವುದು ದೃಷ್ಟಿ 
ಸಲಾಮು ಹೊಡೆಯಲೇಬೇಕು ಏನಿಂತ ಸೃಷ್ಟಿ।।

ಏನು ಅಡಗಿದೆಯೋ ಆ ಒಂದು ಹನಿಯಲಿ 
ಭಗವಂತನ ಆನಂದದ  ಭಾಷ್ಪದಲಿ 
ಎಷ್ಟು  ಕಂಡರು ಸಾಲದು ಭುವಿಯ ಈ ದಿವ್ಯ ಕಳೆ 
ಹೀಗೆಯೇ ದಿನವು ಆಗುತಿರಲಿ ಮಳೆ ।।
---
ಗುರುರಾಜ 

ಸೋಮವಾರ, ಅಕ್ಟೋಬರ್ 14, 2013

ನಯನವಿರದ ನಾಯಕ

Image result for blind man

ನಯನವಿರದ ನಾಯಕ ನಾನು 
ದೋಣಿಯೆ ಇಲ್ಲದ ನಾವಿಕನಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ
ಒಂದು ಹನಿಯು ಚಿಮ್ಮದ ಕಾರ್ಮುಗಿಲಂತೆ।।

ಕನಸಿನ ಕೈಬೆರಳು ಹಿಡಿದು ಹೊರಟಿಹೆ ನಾನು
ಏನು ತಿಳಿಯದ ಮುಗ್ದನಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ 
ಯಾರು ಓದದ ಪುಸ್ತಕದ ಮುನ್ನುಡಿಯಂತೆ।।

ಕಡುಗಪ್ಪು ಒಂದೇ ಬಣ್ಣವೆಂದವನು ನಾನು 
ಎಲ್ಲ ತಿಳಿದ ಮೂರ್ಖ ಮೇಧಾವಿಯಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ 
ಗಾಳಿಗೆ ಓಲಾಡಿದ ಮಗುವಿರದ ತೊಟ್ಟಿಲಂತೆ ।।

ಕಾಸು ಕಾಸೆಂದು ಅದರ ಕಾಲು ಹಿಡಿದವ ನೀನು 
ಜೊಲ್ಲು ಸುರಿಸುತ ಆಸೆ ಬುರುಕನಂತೆ
ನಿನ್ನಯ ಜೀವನವಿದು ಏನೆಂದು ಹೇಳಲಿ 
ಕಣ್ಣಿದರು ಹೆಚ್ಚು ಕಡಿಮೆ ನನ್ನಂತೆ।।
--
ಗುರುರಾಜ