
ಸಾಫ್ಟ್ ವೇರ್ ಲೋಕದಲ್ಲಿ
ನಾನೊಬ್ಬ ಕನ್ನಡಿಗ
ನಾ ಮಾಡುವ ಕೆಲಸವ ನೋಡಿ
ಕರೆವರೆಲ್ಲರು ನನ್ನ "ಜಾವಾ"ಡಿಗ ।।
ಪ್ರತಿನಿತ್ಯ ಎಂಟರಿಂದ - ಹನ್ನೆರಡು ಗಂಟೆ
ಕಛೇರಿಯಲಿ ಕೋಡಿಂಗು ಫಿಕ್ಸಿಂಗು
ಮತ್ತೆ ನಾಲ್ಕು ಗಂಟೆ
ಟ್ರಾಫಿಕ್ ಜಾಮೆಂಬ ಚಕ್ರವ್ಯೂಹದಿ ಫೈಟಿಂಗು ।।
ಸುತ್ತಲಿನ ಅರ್ಧ ಜನರು
ಬರಿ ಮಾಡುವುದು ಪ್ರಮೋಷನ್ ಹೈಕಿಗಾಗಿ ಹೋರಾಟ
ಇನ್ನುಳಿದವರ ಲೋಕದಲ್ಲಿ
ಆನ್ ಸೈಟ್ ಗಾಗಿ ಮ್ಯಾನೇಜರ್ ಜೊತೆಗೆ ಗುದ್ದಾಟ।।
ಸೋಮವಾರದಿಂದ ಗುರುವಾರದವರೆಗೆ
ಎಲ್ಲೆಲ್ಲು ಗಾಂಭೀರ್ಯದ ಪಥಚಲನ
ಶುಕ್ರವಾರ ಬಂತೆದರೆ ಸಾಕು
ಕಾಣುವುದು ಎಲ್ಲೆಡೆ ಚಿರ ಯೌವ್ವನ ।।
ಏಸಿ ಯಲ್ಲಿ ಕುಳಿತು ಓಡಾಡದೆ
ತಲೆ ಓಡಿಸಿ ಬೆವರದೆ ಸುಸ್ತಾಗುವರು
ಬ್ಯಾಂಕಿಗೆ ಕಟ್ಟುವ ಬಡ್ಡಿ ಮಿತಿಮೀರಿ
ಕಂಪನಿಯಿಂದ ಕಂಪನಿಗೆ ಸ್ವಿಚ್ ಆಗುವರು।।
ನಾನು ಇವರಂತೆ ಒಬ್ಬ
ರಿಲೀಸ್ ಮಾಡುವೆ ಜೈಲರ್ ಅಲ್ಲ
ಡೆಲಿವರಿ ಮಾಡಿಸುವೆ ವೈದ್ಯನಲ್ಲ
ಡೆವಲಪ್ಮೆಂಟ್ ಮಾಡುವೆ ರಾಜಕಾರಣಿಯಲ್ಲ॥
ಚೂರು ಪಾರು ಅಂಗ್ಲ ಹಿಂದಿ ಸೇರಿಸಿ
ಜೀವನ ಸಾಗಿಸು ತಿರುವ ಸಾಫ್ಟ್ ವೇರ್ ಕನ್ನಡಿಗ
ನನ್ನದೇ ಊರಲ್ಲಿ ನನ್ನದೇ ನಾಡಲ್ಲಿ
ಇಂದು ನಾನೊಬ್ಬ ಪರಬಾಷಿಗ ।।
--
ಗುರುರಾಜ್