
ಪಥವದು ಸತ್ಯಸಂತರು ನಡೆದ್ದದ್ದು
ಅದೆಷ್ಟೋ ವಿಜ್ಞಾನ ಯೋಗಿಗಳು ಮೆರೆದದ್ದು
ಬಾಹ್ಯಾಕಾಶವನು ಅಲ್ಲೇ ಸಾಕಿ ಸಲುಹಿದ್ದು
ಪೃಥ್ವಿ ಮಂಗಳನೊಂದಿಗೆ ಅಲ್ಲೇ ಸಂಬಂಧ ಬೆಳೆಸಿದ್ದು ।।
ಅಲ್ಲಿ, ಅದೆಷ್ಟೋ ಕಂಬನಿಗಳು ಮಿಡಿದಿರಬಹುದು
ಸಾವಿರಾರು ಕನಸುಗಳು ಚೂರಾಗಿರಬಹುದು
ಲಕ್ಷಾಂತರ ಜನರಿಗೆ ಒಳ್ಳೆಯ ಪಾಠ ಕೂಡ ಕಲಿಸಿರಬಹುದು
ಪ್ರಕೃತಿ ಮುಂದೆ ತಾನೊಬ್ಬ ಕುಬ್ಜ ಎಂದರಿತಿರಬಹುದು।।
ಅಲ್ಲಿ, ಅದೆಷ್ಟೋ ಆಕಾಂಕ್ಷೆಗಳು ಚಿಗುರೊಡೆದಿರಬಹುದು
ಕಾಣಿಸದ ದಿಗಂತದ ದಾರಿ ಕಂಡಿರಬಹುದು
ಕೋಟ್ಯಾಂತರ ಸ್ಫೂರ್ತಿ ಚಿಲುಮೆಯೊಡೆದಿರಬಹುದು
ನಾನೊಬ್ಬ ಭಾರತೀಯನೆಂದು ಹೆಮ್ಮೆ ಪಟ್ಟಿರಬಹುದು ।।
ಜೀವನವೆಂದರೆ ಅಷ್ಟೆ, ಏಳುಬೀಳುಗಳ ಆಗರ
ಇಂದು ಭೂಮಿಗೆ ಬಿದ್ದವ ಧೂಳ್ಗೆಡವಿ
ಮತ್ತೆ ಏರಲೇ ಬೇಕು , ಮೇಲೇಳಲೆ ಬೇಕು
ಸೋಲಿನ ಮುನ್ನುಡಿಯಲಿ ಯಶಸ್ಸಿನ ಪುಸ್ತಕ ಬರೆಯಲೇಬೇಕು||
ನೀನು, ಕುಗ್ಗದೆ , ಮತ್ತೊಮ್ಮೆ ಶಿವನಾಗಬೇಕು
ಶಿವನಾಗಿ ಮೇಲೆದ್ದು , ಅಲ್ಲೇ ಬಿದ್ದಿರುವ
ಆ ಚಂದ್ರನ ಚೂರನ್ನುಒಂದೊಮ್ಮೆ ಮುತ್ತಿಕ್ಕಿ
ನಿನ್ನ ಶಿರಕ್ಕೆ ಮುಡಿಯಬೇಕು ।।
-----
ಗುರುರಾಜ್ ಎಂ ಜೆ