
ಬೇಸಿಗೆ ಕಳೆದು
ಮುಂಗಾರು ಕಾಲಿಡುವ ಹೊತ್ತಿಗೆ
ನಾ ಹೋಗಿದ್ದ ನೆನಪು ।।
ಸಂಜೆ ಅಜ್ಜನೊಂದಿಗೆ ಪೇಟೆಗೆ ಹೋಗಿ
ರಾತ್ರಿ ಬರುವ ಹೊತ್ತಿಗೆ ಕತ್ತಲಾಗಿ
ಅಜ್ಜ ಹಿಡಿದ ಟಾರ್ಚಿನ ಬೆಳಕಲ್ಲಿ
ಬೆಳಕಿನ ಮಹತ್ವ ಅರಿತಿದ್ದ ನೆನಪು।।
ರಾತ್ರಿ ಮಲಗಿದ್ದಾಗ
ಮುಂಗಾರಿನ ಮೊದಲ ಮಳೆಗೆ ಎಚ್ಚರವಾಗಿ
ಒಡೆದ ಅಂಚಿನಿಂದ ನೀರು ತೊಟ್ಟಿಕ್ಕುವಾಗ
ಅದರಡಿ ಅರ್ಧ ಒಡೆದ ಸುಣ್ಣದ ಡಬ್ಬಿ ಇಟ್ಟಿದ್ದ ನೆನಪು ।।
ಮರುದಿನ ನೆರೆ ಮನೆ ಹುಡುಗನ
ಜೊತೆ ಸಮುದ್ರಕೆ ಹೋಗುವೆನೆಂದಾಗ
ಸಮುದ್ರದ ಬದಿ ಹೋಪ್ದು ಬೇಡ
ಕಡಲ್ಕೊರೆತವಂತೆ ಎಂದು ಅಜ್ಜ ಗದರಿದ ನೆನಪು ।।
ಇಂದು ಸುಮಾರು ಇಪ್ಪತ್ತೈದು ವರ್ಷಗಳ
ನಂತರ ಅದೇ ಪೇಟೆಗೆ ಹೋಗಿ
ಮರಳಿ ಬರುವಾಗ ಕಂಡ ಸುತ್ತ ಬೀದಿ ದೀಪಗಳ ನಡುವೆ
ಕಾಡಿದ್ದು ಆ ಕಡು ಕತ್ತಲ ನೆನಪು ।।
ರಾತ್ರಿ ಮಲಗಿದ್ದಾಗ
ಮತ್ತದೆ ಮುಂಗಾರಿನ ಮಳೆಗೆ ಎಚ್ಚರವಾಗಿ
ಮೇಲೆ ನೋಡಿದಾಗ ಕಂಡ ತಾರಸಿಯ ಮರೆಯಲ್ಲಿ
ಕಾಡಿದ್ದು ಒಡೆದ ಅಂಚಿನ ನೆನಪು।।
ಮತ್ತದೆ ನೆರೆಮನೆಯವನ ಜೊತೆ ಕಡಲೆಡೆಗೆ ಹೊರಟಾಗ
ಇದ್ದದ್ದು ಅದೇ ಕಡಲು ಅದೇ ಕಡಲ್ಕೊರೆತ
ಆದರೆ ಸಮುದ್ರದ ಬದಿ ಹೋಪ್ದು ಬೇಡ
ಎಂದ ಗದರುವ ಅಜ್ಜ ಮಾತ್ರ ಇಂದು ಬರಿ ನೆನಪು ।।
-----
ಗುರುರಾಜ್ ಎಂ ಜೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ