ಪುಟಗಳು

ಭಾನುವಾರ, ಸೆಪ್ಟೆಂಬರ್ 28, 2014

ಬೆಳದಿಂಗಳ ಬಾಲೆ

ಇದೊಂದು ನಾ ಕಂಡ ಒಂದು ಅತ್ಯದ್ಭುತ ಚಿತ್ರ
ನನಗೆ ತುಂಬಾ ಹಿಡಿಸಿದ ಚಿತ್ರ
ಈ ಕವನ ಆ ಚಿತ್ರಕ್ಕೆ ಅರ್ಪಣೆ
ಬೆಳದಿಂಗಳ ಬಾಲೆ (೧೯೯೫)
ನಾಯಕ - ರೇವಂತ (ಅನಂತನಾಗ್ )
ನಾಯಕಿ - ರಮ್ಯ (ಸುಮನ್ ನಗರಕರ್ )
ನಿರ್ದೇಶಕ- ಸುನಿಲ್ ಕುಮಾರ್ ದೇಸಾಯಿ


ಬೆಳದಿಂಗಳ ಬಾಲೆ
-------------------------
ಚದುರಂಗ ಇದೆ ಇವನ ಕಾಯಕ
ಇವನೇ ಈ ಚಿತ್ರದ ನಾಯಕ
ಪ್ರಶಸ್ತಿ ಪುರಸ್ಕಾರ ಇವನ ಮಡಿಲಲಿ ಹಲವಾರು
ಇವನ ಪ್ರತಿಭೆ ಗುರುತಿಸಿದವರು ಮಾತ್ರ  ಕೆಲವರು।।

ಹೀಗೆಯೇ ಕೊರಗಲಿ  ಕುಳಿತವನಿಗೆ ಬಂತೊಂದು ಕರೆ
ಅವನ ಬದುಕಲಿ ಮೂಡಿತು ಹೊಸತೊಂದು ಗೆರೆ
ಮಧುರ ಕಂಠದಲಿ ಕೆಣಕುತ ಇವನ ಮನವ
ಅವಳು ತೋರಿಸಿದಳು ತನ್ನ ಅಭಿಮಾನವ।।

ಒಗಟು ಬೆಸೆಯುವುದೆ ಅವಳ ಜೀವನ
ಅದನು ಬಿಡಿಸುತ ಕೂತನು ಈತ ಅನುದಿನ
ನಡುವೆಯೇ ಬಂದು ಹೋದವು ಅವನಿಗೆ ಕಷ್ಟದ ದಿನಗಳು
ಆಗಲು ಅವನ ಹಿಂದೆ ನಿಂತಳು ಪ್ರತಿ ಕ್ಷಣಗಳು।।

ಹೀಗೆಯೇ  ಕೊನೆಗೊಂದು ದಿನ ಅವಳ ಕಂಡು ಹಿಡಿಯಲು
ಅವಳೇ  ಕೊಟ್ಟ ಒಗಟನು  ಬಿಡಿಸಲು
ತನ್ನ ಬುದ್ಧಿಯೊಂದಿಗೆ ಸ್ನೇಹಿತರ ಸಹಾಯ ಪಡೆದನು
ಕೊನೆಗೂ ಅವಳ್ಯಾರೆಂದು ಕಂಡು ಹಿಡಿದನು।।

ಇದೆ ಖುಷಿಯಲಿ ಅವಳ ನೋಡಲು ಹೊರಟವನ ಕೈಯಲ್ಲಿ
ಅವಳಪ್ಪ ಕೈಗಿಟ್ಟರು ಒಂದು ಪತ್ರ ಆ ಸಂಜೆಯಲಿ
ಆ ಪತ್ರವ ಓದಿದೊಡನೆಯೆ ಕಾಲಡಿಯ ಭೂಮಿ ಕುಸಿಯಿತು
ಆ ಕನಸಿನ ಬೊಂಬೆ ಖಾಯಿಲೆಗೆ ಬಲಿಯಾದಳೆಂದು ತಿಳಿಯಿತು।।

ಇಷ್ಟಾದರೂ ಕೊನೆಗೂ ಅವಳ ಮುಖವ ನೋಡುವುದಿಲ್ಲ ರೇವಂತ
ಹೇಳುತ , ರಮ್ಯ ನನ್ನ ಕಲ್ಪನೆಯಲ್ಲಿ ಇನ್ನೂ  ಜೀವಂತ
ನಾಯಕನ ಜೀವನದಲ್ಲಿ ತೋರಿಸಿದ್ದ ವಿಧಿ ತನ್ನ ಲೀಲೆ
ಮರೆಯಾಗಿಸಿ ಅವನ ಪ್ರೀತಿಯ ಬೆಳದಿಂಗಳ  ಬಾಲೆ ।।
--
ಗುರುರಾಜ  

ಮಂಗಳವಾರ, ಜುಲೈ 15, 2014

ಉಳಿದವರು ಕಂಡಂತೆ


ನಾ ಗೆಲ್ಲುವೆ
ನನ್ನಾಣೆಗೂ ನಾ ಗೆಲ್ಲುವೆ
ಸೋತರೇನಂತೆ ಈ ದಿನ
ಮುಂದೊಂದು ದಿನ ಗೆದ್ದೇ ತೀರುವೆ ।।

ಕನಸುಗಳು ಕೈ ಕೊಟ್ಟರೇನಂತೆ
ಮನಸಿಗೆ ನೋವಾದರೇನಂತೆ
ಸೋತರೇನಂತೆ ಈ ದಿನ
ನನ್ನ ಬದುಕು ಎಲ್ಲರ ಬದುಕಂತೆ ।।

ಸೋಲಿಲ್ಲದ ಜೀವನ
ಸಾವಿಲ್ಲದ ಮನೆಯಂತೆ
ಸೋತರೇನಂತೆ ಈ ದಿನ
ಸೋಲೆಂಬುದು ಸಾಮಾನ್ಯವಂತೆ।।

ಗೆಲುವಿಗೊಂದೆ ನೆಲೆಯಂತೆ
ಸೋಲಿಗಿಲ್ಲಿ ಶೂನ್ಯ ಬೆಲೆಯಂತೆ
ಸೋತರೇನಂತೆ ಈ ದಿನ
ಸೋತು ಗೆಲ್ಲುವುದು ಒಂದು ಕಲೆಯಂತೆ।।

ಗೆದ್ದವನಿಗೆ ಬಂಗಾರದ ತೊಟ್ಟಿಲಂತೆ
ಸೋತವನ ತೆಕ್ಕೆಗೆ ತಾಮ್ರದ ಬಟ್ಟಲಂತೆ
ಸೋತರೇನಂತೆ ಈ ದಿನ
ಸೋಲೇ ಗೆಲುವಿನ ಮೊದಲ ಮೆಟ್ಟಿಲಂತೆ ।।

ಕೊನೆಗೊಂದು ಮಾತು ಹೇಳುವೆ
ನನ್ನಾಣೆಗೂ ನಾ ಗೆದ್ದೇ ಗೆಲ್ಲುವೆ
ಆದರೆ ಗೆಲ್ಲಲಿ ಸೋಲಲಿ ಮುಂದೊಂದು ದಿನ
ನನ್ನ ಬದುಕು ಕೂಡ ಉಳಿದವರು ಕಂಡಂತೆ ।।
--
ಗುರುರಾಜ

ಭಾನುವಾರ, ಮೇ 11, 2014

ಹುಚ್ಚ


ಅಂದು ಅವನೇ ನಾಯಕ ಅವಳೇ ನಾಯಕಿ
ಪ್ರೀತಿಯ ಗೀತೆಯಲ್ಲಿ ಅವನೇ  ಗಾಯಕ ಅವಳೇ ಗಾಯಕಿ
ಎಲ್ಲರ ಮರೆತು ಪ್ರೇಮ ಪಕ್ಷಿಯಂತೆ  ಹಾರಾಡಿದನು
ಪ್ರೇಮದಂಬರವನು  ಅವಳೊಂದಿಗೆ ತಲುಪಿದನು।।

ಏನೋ ಸಂತಸ ಏನೋ ಹರುಷ
ಎಲ್ಲವೂ ತನ್ನದೆನ್ನುವ ಅಹಂ ತೋರಿದ ಪುರುಷ
ಅವನಿಗೋ ಅವನ ಪ್ರೀತಿಯೊಂದೆ ಸ್ವಚ್ಛ
ಆದರವನು ಎಲ್ಲರ ದೃಷ್ಟಿಯಲ್ಲಿ ಅರೆ ಹುಚ್ಚ ।।

ಇಂದು ಅದೇಕೋ ಕೆದರಿಕೊಂಡ ತಲೆ
ಮೈ ಕೈ ಕೆರೆಯುತ ಆಕಾಶದೆಡೆಗೆ ನೋಡುವುದೇ ಕಲೆ
ಒಬ್ಬನೇ ನಗುವನು ಒಬ್ಬನೇ ಅಳುವನು
ಸಿಕ್ಕ ಸಿಕ್ಕವರನೆಲ್ಲ ಕರೆದು ಬೈಯ್ಯುವನು ।।

ಯಾವುದೋ ಒಂದು ಅನುಮಾನ ಮೂಡಿಸಿತು ಮನಸ್ತಾಪ
ಅವನ ಜೀವನ ತೊರೆದು ನಡೆದೇ ಬಿಟ್ಟಳು ಪಾಪ
ಅವಳ ಹರಿದ ಚಿತ್ರವ ನೋಡುತ ಹರಿಸುತ ಕಂಬನಿ ಗುಚ್ಛ
 ಆಗಿರುವನು ಅವನು ಇಂದು ಪೂರ್ತಿ ಹುಚ್ಚ।।

----------
ಗುರುರಾಜ

 

ಭಾನುವಾರ, ಜನವರಿ 19, 2014

ನಗಿಸುವುದು ನನ್ನ ಜೀವನ


ನಾ ನಕ್ಕು ನಿಮ್ಮನಿಂದು 
ನಗಿಸುವುದು ನನ್ನ ಜೀವನ 
ನಗುವುದು ಬಿಡುವುದು 
ನಿಮಗೆ ಬಿಟ್ಟಿರುವೆ ಈ ದಿನ 

ಅವರಿವರ ಕಾಲೆಳೆಯುತ
ಸಂತಸದ ಗೆರೆಯನು ಮೂಡಿಸುತ
ನಗಿಸಿದೆ ನಿಮ್ಮನು ಈ ಕ್ಷಣ 
ಬಡಿಸುತ ಎಲ್ಲರಿಗೂ ನಗೆಯ ಹೂರಣ 

ನಗುವುದನು ಮರೆತವರಿಗೆ 
ನಗಿಸೆಂದು ನನ್ನ ಅವನು ಕಳುಹಿಸಿದ 
ನಗುವೊಂದು ಔಷಧಿಯ ಹಾಗೆ 
ನೀನದನು ಹಂಚೆಂದು  ನನಗೆ ವಿವರಿಸಿದ 

ಅವನ ಆಣತಿಯಂತೆ ನಡೆಸಿರುವೆ ಬಾಳನು 
ಮರೆಯುತ ಪ್ರತಿ ಕ್ಷಣವೂ ನನ್ನೆಲ್ಲ ಗೋಳನು 
ಬಾಳೆಂಬುದು ಮುಳ್ಳಿನ ಹಾದಿಯಿದು 
ಖಚಿತ ಎಲ್ಲರೂ ಈ ಹಾದಿಯಲಿ ಸಾಗುವುದು 

ಎಲ್ಲೊ ಇರುವ ಗಲೀಜು ನೀರಿಗೆ ಹೆದರಿ 
ಈಗಲೇ ಪಂಚೆ ಯಾಕೆ ಎತ್ತುವೆ 
ಹುರುಪಿನಲಿ ಬಾಳು ನೀನು 
ನಿನ್ನ ಮುಸುಡಿಗೆ ನಗುವುದು ಕಷ್ಟವೇ  

ನಾ ನಕ್ಕು ನಿಮ್ಮನಿಂದು 
ನಗಿಸುವುದು ನನ್ನ ಜೀವನ 
ನಗುವುದು ಬಿಡುವುದು 
ನಿಮಗೆ ಬಿಟ್ಟಿರುವೆ ಈ ದಿನ 

---
ಗುರುರಾಜ 

ಸೋಮವಾರ, ನವೆಂಬರ್ 4, 2013

ಬ್ರಹ್ಮಚಾರಿಯ ಗೋಳು

ಬಂದಿತೊಂದು ಶುಕ್ರವಾರ
ಕೈಯಲ್ಲಿ ಏಕೋ ಅರಿಶಿನ ದಾರ 
ನನ್ನ ಕಡೆಯೇ ವಾಲಿತೊಂದು ಕತ್ತು 
ಮರುಕ್ಷಣ ಮೂರು ಗಂಟು ಬಿತ್ತು।।

ಇಷ್ಟು ದಿನ  ನಾನೊಬ್ಬ ಬ್ರಹ್ಮಚಾರಿ
ಆಗಿದ್ದೆ ಬರಿ ಸಂತೋಷದ  ವ್ಯಾಪಾರಿ
ಮನೆಯವರಿಗೆ ಮಾತ್ರ ನಾನು ಒಂಟಿ ಸಲಗ 
ಒತ್ತಾಯದ ಮೇರೆಗೆ ಊದಿಸಿದರು ವಾಲಗ।।

ಕನಸುಗಳ ಮೂಟೆಯೊತ್ತ ಯುವಕ 
ಕಾಣದ ಜಗತ್ತು ನೋಡುವ ತವಕ 
ಕಟ್ಟುವಷ್ಟರಲ್ಲಿ ಸಮಾನ ವಯಸ್ಕರ ಮಂಡಳಿ 
ಅವಳ ಜಾತಕದ ಜೊತೆ ಕೂಡಿತು ನನ್ನ ಕುಂಡಲಿ।।

ತಾಳ ತಪ್ಪಿದ ಹಾಗೆ ನಾಡಿ ಮಿಡಿತ 
ಅಷ್ಟು ಗಟ್ಟಿಯಾಗಿದೆ ಈ ಬಾಸಿಂಗದ ಹಿಡಿತ 
ಒಂದೇ ಪ್ರಶ್ನೆ ಹೀಗಲು ಕಾಡುತ್ತಿರುವುದು ಅದುವೇ 
ಬೇಕಿತ್ತಾ ಹೇಳಿ ನನಗೀ ಮದುವೆ ।।
--
ಗುರುರಾಜ 

ಭಾನುವಾರ, ಅಕ್ಟೋಬರ್ 27, 2013

ಮಳೆ


ಬಾನಂಗಳದಿ ಕಪ್ಪು ಛಾಯೆ 
ಮೋಡಗಳಲ್ಲ ಅದು ಸೃಷ್ಟಿಕರ್ತನ ಮಾಯೆ 
ಸಾಲು ಸಾಲಿನಲಿ ಹಿಂದಿಂದೆ ಒಂದೊಂದು 
ನೂಕು ನುಗ್ಗಾಟ ನಡೆಸಿವೆ  ಬಾನಲಿ ಇಂದು।।

ಬಹು ದೂರದಿಂದ ಸಾಗಿ ಬಂದಂತೆ 
ಯಾಕೋ ತೀರ ಸುಸ್ತಾಗಿ ನಿಂತಂತೆ
ಹೊಂಚು ಹಾಕಿದವು ಎಲ್ಲ ಭುವಿಗಿಳಿಯಲು 
ಒಂದೈದು ಕ್ಷಣ ವಿಶ್ರಾಂತಿ ಪಡೆಯಲು।।

ಅದನು ಕಂಡ  ಭೂ ಮಾತೆ ಕರೆಯುತ ಕೈ ಚಾಚಿ 
ಬಾಚಿ ತಬ್ಬಲು ಬಂತು ಮೋಡವದು ತುಸು ನಾಚಿ
ಹನಿಗಳ ಸರಮಾಲೆ ಭುವಿಯತ್ತ ಧುಮುಕುತಲಿ
ಭೂ ರಮೆಯು ಆನಂದದಿ ನಲಿಯುತ ಕುಣಿಯುತಲಿ।।

ಕ್ಷಣದಲ್ಲೇ ಎಲ್ಲೆಲು ಹಸಿರ ಕ್ರಾಂತಿ 
ನೋಡಿದರೆ ಸಾಕು ನಯನಕೆ ಶಾಂತಿ 
ಭೂ ಮಾತೆಯೇ ನಿನಗೆ ತಾಕುವುದು ದೃಷ್ಟಿ 
ಸಲಾಮು ಹೊಡೆಯಲೇಬೇಕು ಏನಿಂತ ಸೃಷ್ಟಿ।।

ಏನು ಅಡಗಿದೆಯೋ ಆ ಒಂದು ಹನಿಯಲಿ 
ಭಗವಂತನ ಆನಂದದ  ಭಾಷ್ಪದಲಿ 
ಎಷ್ಟು  ಕಂಡರು ಸಾಲದು ಭುವಿಯ ಈ ದಿವ್ಯ ಕಳೆ 
ಹೀಗೆಯೇ ದಿನವು ಆಗುತಿರಲಿ ಮಳೆ ।।
---
ಗುರುರಾಜ 

ಸೋಮವಾರ, ಅಕ್ಟೋಬರ್ 14, 2013

ನಯನವಿರದ ನಾಯಕ

Image result for blind man

ನಯನವಿರದ ನಾಯಕ ನಾನು 
ದೋಣಿಯೆ ಇಲ್ಲದ ನಾವಿಕನಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ
ಒಂದು ಹನಿಯು ಚಿಮ್ಮದ ಕಾರ್ಮುಗಿಲಂತೆ।।

ಕನಸಿನ ಕೈಬೆರಳು ಹಿಡಿದು ಹೊರಟಿಹೆ ನಾನು
ಏನು ತಿಳಿಯದ ಮುಗ್ದನಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ 
ಯಾರು ಓದದ ಪುಸ್ತಕದ ಮುನ್ನುಡಿಯಂತೆ।।

ಕಡುಗಪ್ಪು ಒಂದೇ ಬಣ್ಣವೆಂದವನು ನಾನು 
ಎಲ್ಲ ತಿಳಿದ ಮೂರ್ಖ ಮೇಧಾವಿಯಂತೆ 
ನನ್ನಯ ಜೀವನವಿದು ಏನೆಂದು ಹೇಳಲಿ 
ಗಾಳಿಗೆ ಓಲಾಡಿದ ಮಗುವಿರದ ತೊಟ್ಟಿಲಂತೆ ।।

ಕಾಸು ಕಾಸೆಂದು ಅದರ ಕಾಲು ಹಿಡಿದವ ನೀನು 
ಜೊಲ್ಲು ಸುರಿಸುತ ಆಸೆ ಬುರುಕನಂತೆ
ನಿನ್ನಯ ಜೀವನವಿದು ಏನೆಂದು ಹೇಳಲಿ 
ಕಣ್ಣಿದರು ಹೆಚ್ಚು ಕಡಿಮೆ ನನ್ನಂತೆ।।
--
ಗುರುರಾಜ