ಪುಟಗಳು

ಭಾನುವಾರ, ಸೆಪ್ಟೆಂಬರ್ 13, 2015

ಕತ್ತಲು



ಗಾಜಿನರಮನೆಯ ಜೋಡಿಗೆ
ಬೆಳಕಿನಡಿಯಲ್ಲಿ ಕಾಡಿತು ಒಂಟಿತನ
ಅವ ಒಮ್ಮೆ ಹೊರಗೆ
ಇವಳು ಒಮ್ಮೆ ಹೊರಗೆ।।

ನಾಚಿಕೆಯ ಸರದಿಯೋ
ಕೋಪದ ಬೇಗೆಯೋ ಎಂಬ ಭಾಸ
 ಅವ ಒಮ್ಮೆ ಹೊರಗೆ
ಇವಳು ಒಮ್ಮೆ ಹೊರಗೆ।।

ಮೌನದ ಮಡಿಲಿನಲ್ಲಿ
ಮಾತದು ತೆಪ್ಪಗೆ ಮಲಗಿದಂತೆ
ಇವನ ದೃಷ್ಟಿ ಅವಳೆಡೆಗೆ
ಅವನ ದೃಷ್ಟಿ ಆಕಾಶದೆಡೆಗೆ ।।

ಕೊನೆಗದು ಕತ್ತಲೆಯ ಜಾದು
ಗಾಜಿನರಮನೆಯಲಿ ಬೆಸುಗೆ ಹಾಕಿತಂತೆ
ಅವ ಇವಳ ತೆಕ್ಕೆಗೆ
ಇವಳು ಅವನ ತೆಕ್ಕೆಗೆ।।

ಕತ್ತಲಲ್ಲು ಕೂಡ
ಬೆಳಕಿನ ಛಾಯೆಯಿದೆ ಅದು  ಸತ್ಯ
ಅದು ಕಾಣುವುದು
ಕೇವಲ ಅದನ್ನು ಹುಡುಕುವವರಿಗೆ।।

---
ಗುರುರಾಜ

ಭಾನುವಾರ, ಜೂನ್ 28, 2015

ನಾ ದೊಡ್ಡವನಾದೆ


ಕನ್ನಡಿ ಮುಂದೆ ನಿಂತು
ಚಿಗುರಿದ ಮೀಸೆ ನೋಡಿ
ಏನೋ ಉತ್ಸಾಹದಲ್ಲಿ ಖುಷಿ ಪಟ್ಟಾಗ
ನಾ ದೊಡ್ದವನಾಗಲಿಲ್ಲ

ಅವಳ ಮುಂದೆ ನಿಂತು
ಹಾಗೆ ಸುಮ್ಮನೆ ನಕ್ಕಾಗ
ಅವಳು ಕೋಪದಿ ಮೂತಿ ತಿರುಗಿಸಿಕೊಂಡು ಹೋದಾಗ
ನಾ ದೊಡ್ದವನಾಗಲಿಲ್ಲ 

 ಬರೆದ ಪರೀಕ್ಷೆಯಲಿ
ಉತ್ತಮ ಅಂಕ ಪಡೆದು
ಅಕ್ಕ ಪಕ್ಕದವರ ಹಿಂದಿಕ್ಕಿದಾಗ
ನಾ ದೊಡ್ದವನಾಗಲಿಲ್ಲ  

ಕೆಲಸಕೆ ಹೋಗಿ
ಮೊದಲ ಸಂಬಳ ತಂದೆಯ ಕೈಗೆ ಕೊಟ್ಟು
ಅವರ ಕಣ್ಣಲ್ಲಿ ಹೊಳಪ ಕಂಡಾಗ
ನಾ ದೊಡ್ಡವನಾದೆ ।।

--
ಗುರುರಾಜ 

ಭಾನುವಾರ, ಸೆಪ್ಟೆಂಬರ್ 28, 2014

ಬೆಳದಿಂಗಳ ಬಾಲೆ

ಇದೊಂದು ನಾ ಕಂಡ ಒಂದು ಅತ್ಯದ್ಭುತ ಚಿತ್ರ
ನನಗೆ ತುಂಬಾ ಹಿಡಿಸಿದ ಚಿತ್ರ
ಈ ಕವನ ಆ ಚಿತ್ರಕ್ಕೆ ಅರ್ಪಣೆ
ಬೆಳದಿಂಗಳ ಬಾಲೆ (೧೯೯೫)
ನಾಯಕ - ರೇವಂತ (ಅನಂತನಾಗ್ )
ನಾಯಕಿ - ರಮ್ಯ (ಸುಮನ್ ನಗರಕರ್ )
ನಿರ್ದೇಶಕ- ಸುನಿಲ್ ಕುಮಾರ್ ದೇಸಾಯಿ


ಬೆಳದಿಂಗಳ ಬಾಲೆ
-------------------------
ಚದುರಂಗ ಇದೆ ಇವನ ಕಾಯಕ
ಇವನೇ ಈ ಚಿತ್ರದ ನಾಯಕ
ಪ್ರಶಸ್ತಿ ಪುರಸ್ಕಾರ ಇವನ ಮಡಿಲಲಿ ಹಲವಾರು
ಇವನ ಪ್ರತಿಭೆ ಗುರುತಿಸಿದವರು ಮಾತ್ರ  ಕೆಲವರು।।

ಹೀಗೆಯೇ ಕೊರಗಲಿ  ಕುಳಿತವನಿಗೆ ಬಂತೊಂದು ಕರೆ
ಅವನ ಬದುಕಲಿ ಮೂಡಿತು ಹೊಸತೊಂದು ಗೆರೆ
ಮಧುರ ಕಂಠದಲಿ ಕೆಣಕುತ ಇವನ ಮನವ
ಅವಳು ತೋರಿಸಿದಳು ತನ್ನ ಅಭಿಮಾನವ।।

ಒಗಟು ಬೆಸೆಯುವುದೆ ಅವಳ ಜೀವನ
ಅದನು ಬಿಡಿಸುತ ಕೂತನು ಈತ ಅನುದಿನ
ನಡುವೆಯೇ ಬಂದು ಹೋದವು ಅವನಿಗೆ ಕಷ್ಟದ ದಿನಗಳು
ಆಗಲು ಅವನ ಹಿಂದೆ ನಿಂತಳು ಪ್ರತಿ ಕ್ಷಣಗಳು।।

ಹೀಗೆಯೇ  ಕೊನೆಗೊಂದು ದಿನ ಅವಳ ಕಂಡು ಹಿಡಿಯಲು
ಅವಳೇ  ಕೊಟ್ಟ ಒಗಟನು  ಬಿಡಿಸಲು
ತನ್ನ ಬುದ್ಧಿಯೊಂದಿಗೆ ಸ್ನೇಹಿತರ ಸಹಾಯ ಪಡೆದನು
ಕೊನೆಗೂ ಅವಳ್ಯಾರೆಂದು ಕಂಡು ಹಿಡಿದನು।।

ಇದೆ ಖುಷಿಯಲಿ ಅವಳ ನೋಡಲು ಹೊರಟವನ ಕೈಯಲ್ಲಿ
ಅವಳಪ್ಪ ಕೈಗಿಟ್ಟರು ಒಂದು ಪತ್ರ ಆ ಸಂಜೆಯಲಿ
ಆ ಪತ್ರವ ಓದಿದೊಡನೆಯೆ ಕಾಲಡಿಯ ಭೂಮಿ ಕುಸಿಯಿತು
ಆ ಕನಸಿನ ಬೊಂಬೆ ಖಾಯಿಲೆಗೆ ಬಲಿಯಾದಳೆಂದು ತಿಳಿಯಿತು।।

ಇಷ್ಟಾದರೂ ಕೊನೆಗೂ ಅವಳ ಮುಖವ ನೋಡುವುದಿಲ್ಲ ರೇವಂತ
ಹೇಳುತ , ರಮ್ಯ ನನ್ನ ಕಲ್ಪನೆಯಲ್ಲಿ ಇನ್ನೂ  ಜೀವಂತ
ನಾಯಕನ ಜೀವನದಲ್ಲಿ ತೋರಿಸಿದ್ದ ವಿಧಿ ತನ್ನ ಲೀಲೆ
ಮರೆಯಾಗಿಸಿ ಅವನ ಪ್ರೀತಿಯ ಬೆಳದಿಂಗಳ  ಬಾಲೆ ।।
--
ಗುರುರಾಜ  

ಮಂಗಳವಾರ, ಜುಲೈ 15, 2014

ಉಳಿದವರು ಕಂಡಂತೆ


ನಾ ಗೆಲ್ಲುವೆ
ನನ್ನಾಣೆಗೂ ನಾ ಗೆಲ್ಲುವೆ
ಸೋತರೇನಂತೆ ಈ ದಿನ
ಮುಂದೊಂದು ದಿನ ಗೆದ್ದೇ ತೀರುವೆ ।।

ಕನಸುಗಳು ಕೈ ಕೊಟ್ಟರೇನಂತೆ
ಮನಸಿಗೆ ನೋವಾದರೇನಂತೆ
ಸೋತರೇನಂತೆ ಈ ದಿನ
ನನ್ನ ಬದುಕು ಎಲ್ಲರ ಬದುಕಂತೆ ।।

ಸೋಲಿಲ್ಲದ ಜೀವನ
ಸಾವಿಲ್ಲದ ಮನೆಯಂತೆ
ಸೋತರೇನಂತೆ ಈ ದಿನ
ಸೋಲೆಂಬುದು ಸಾಮಾನ್ಯವಂತೆ।।

ಗೆಲುವಿಗೊಂದೆ ನೆಲೆಯಂತೆ
ಸೋಲಿಗಿಲ್ಲಿ ಶೂನ್ಯ ಬೆಲೆಯಂತೆ
ಸೋತರೇನಂತೆ ಈ ದಿನ
ಸೋತು ಗೆಲ್ಲುವುದು ಒಂದು ಕಲೆಯಂತೆ।।

ಗೆದ್ದವನಿಗೆ ಬಂಗಾರದ ತೊಟ್ಟಿಲಂತೆ
ಸೋತವನ ತೆಕ್ಕೆಗೆ ತಾಮ್ರದ ಬಟ್ಟಲಂತೆ
ಸೋತರೇನಂತೆ ಈ ದಿನ
ಸೋಲೇ ಗೆಲುವಿನ ಮೊದಲ ಮೆಟ್ಟಿಲಂತೆ ।।

ಕೊನೆಗೊಂದು ಮಾತು ಹೇಳುವೆ
ನನ್ನಾಣೆಗೂ ನಾ ಗೆದ್ದೇ ಗೆಲ್ಲುವೆ
ಆದರೆ ಗೆಲ್ಲಲಿ ಸೋಲಲಿ ಮುಂದೊಂದು ದಿನ
ನನ್ನ ಬದುಕು ಕೂಡ ಉಳಿದವರು ಕಂಡಂತೆ ।।
--
ಗುರುರಾಜ