ಪುಟಗಳು

ಶನಿವಾರ, ಮಾರ್ಚ್ 16, 2013

ಕನ್ಸು...ಸುಮ್ಗೆ ತಮಾಷೆಗೆ



ಹಾಗೆ ಸುಮ್ಗೆ ನಡ್ಕೊಂಡ್ ಬಂದೆ
ಅಕಾಶ್ದ ಕೆಳಗೆ  ಮೆಲ್ಗೆ
ಸುಸ್ತಾಗೊಯ್ತು ಮಲ್ಕೊಂಡ್ ಬಿಟ್ಟೆ
ಭೂಮಿ ಮೇಲೆ ಹಂಗೆ॥

ಹಾಗೆ ತಣ್ಣಗ್ ಗಾಳಿ ಬೀಸ್ತು
ನಿದ್ದೆ ಮಾಡ್ದೆ ಅಲ್ಲೆ
ಹಿಂದಿಂದೇನೆ ಬಂದೆ ಬಿಟ್ಲು
ಕನಸಲ್ ನನ್ ನಲ್ಲೆ॥

ಏನ್ ಅಂದ ಏನ್ ಚಂದ
ಹೇಳೋದ್ ವಸಿ ಕೇಳಿ
ಅವಳ್ ಗಿಂತ ಚಂದ  ಹುಡ್ಗಿ ಸಿಕ್ಕರೆ
ಬಿರ್ರನೆ ಬಂದು ಹೇಳಿ॥

ಅವಳ್ ಅಂಗೆ ನಕ್ಕ್  ಬಿಟ್ರಂತು
ಬರಗಾಲ್ದಲ್ಲೂ ಸುಗ್ಗಿ
ತಿರ್ಗಿ ಕಣ್ಣ ಹೊಡ್ದು ಬಿಟ್ರೆ
ಮರಿದೆ ಇರ್ತದ ಮಗ್ಗಿ ॥

ಬಂಡೆಗಲ್ ನು  ಮಾತಾಡ್ ಸ್ತಾಳೆ
ಅಂತ ಮಾತಿನ ಮಲ್ಲಿ
ಊರ್ ತುಂಬಾ ಓಡಾಡ್ ತಾಳೆ
ತುಂಟ ನಗೆಯ ಚೆಲ್ಲಿ ॥

ನಂಗೆ ಅವ್ಳು ಸಿಗ್ಲಿ ಅಂತ
ದ್ಯಾವರನ್ನ ಬೇಡ್ಕೊಂಡ್ ಬಿಟ್ಟೆ
ನೂರೊಂದ್ ತೆಂಗಿನ ಕಾಯಿ ಹರಕೆ
ಜೊತಗೆ ಬೆಳ್ಳಿ ತಟ್ಟೆ ॥

ದ್ಯಾವ್ರಿಗ್ಯಾಕೋ ಕೋಪ ಬಂತು
ಭೂಮಿಗೆ ಬರ್ತಾ ಅವ್ನೆ
ಯಾಕೋ ಸುಮ್ಗೆ ದಿಗ್ಲ್ ಹತ್ಕೊಂತು
ಏನ್ ಕಾದಿದ್ಯೋ ಶಿವನೆ ॥

ದಿಕ್ಕೇ ಇಲ್ಲದ್  ಪರದೇಸಿ ನೀನು
ಯಾಕೋ ಪ್ರೀತಿ ಪಾಠ
ಬಡವ ನೀನು ಮಡಗ್ದಂಗಿರು
ಅಂತ ಹೋಗೆ ಬಿಟ್ಟ  ॥

ಕ್ಷಮಿಸು ದೇವ ತಪ್ಪಾಗೋಯ್ತು
ಇನ್ನು ಹುಡ್ಗನ್ ವಯಸ್ಸು
ಅಂತ ಅಂಗೆ ಕಣ್ಣ ಬಿಟ್ಟೆ
ಮುಗಿತು ತಿರಕನ ಕನಸು॥
--
ಗುರುರಾಜ 

ಶನಿವಾರ, ಮಾರ್ಚ್ 2, 2013

ರಾಧೆಯ ಕೂಗು



ಕಣ್ಣ ಮುಚ್ಚಿ ತೆರೆದಾಗ ಕಾಣದ ನಿನ್ನ ವದನ
ಹಾಗೆಯೇ  ಕಂಬನಿ ಕಣ್ಣ ರೆಪ್ಪೆಗಳ ಮಿಲನ 
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ನಿನ್ನ ನೆನಪುಗಳ ನನ್  ಹಣೆಗೆ ಚುಂಬಿಸಿ
ಮನದಾಳದಲಿ ಅಲೆಗಳನ್ನೆಬ್ಬಿಸಿ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥ 

ಪ್ರೇಮ ರಾಗವನು ಸಂಗಡ ಹಾಡಿ 
ಆ ಸಂಜೆ ಏಕಾಂತದಲಿ ಏಕಾಂಗಿ ಮಾಡಿ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ಪ್ರೇಮದಂಬರದಲಿ ಸೂರ್ಯನಂತೆ ಮೆರೆದು
ಮೆಲ್ಲನೆ ಮೋಡದ ಮರೆಯಲಿ ಸರಿದು
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ಲೋಕವೇ ನೀನೆಂದವಳನು ತಿರಸ್ಕರಿಸುತ
ಲೋಕೊದ್ಧಾರದ ಮನವಿಯನು ಪುರಸ್ಕರಿಸುತ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥
---
ಗುರುರಾಜ
(ಎಚ್  ಎಸ್  ವೆಂಕಟೇಶ್ ಮೂರ್ತಿ ಯವರ ಲೋಕದ ಕಣ್ಣಿಗೆ ರಾಧೆಯು ಕೂಡ ಹಾಡಿನಿಂದ ಸ್ಪೂರ್ತಿ ಪಡೆದು ಬರೆದ ಪದ್ಯ)

ಗುರುವಾರ, ಫೆಬ್ರವರಿ 21, 2013

ಶರಣು ಯೋಧ




ಬಿಸಿಲು ಮಳೆ ರಾತ್ರಿ ಹಗಲೆನ್ನದೆ
ಯಾವ ಶತ್ರುವಿಗೂ ಜಗ್ಗದೆ 
ಭಾರತಾಂಬೆಗೆ ಮುಡಿಪಾಗಿದೆ ನಿನ್ನೆದೆ 
ಹೇಗೆ ಇರಲು ಸಾಧ್ಯ ನಿನಗೆ ಶರಣು ಎನ್ನದೆ॥

ಮೌನ ತಬ್ಬಿದ ಮಂಜಿನಲಿ
ಕ್ಷಣಕ್ಷಣವು ಕೇಳುವ ಗುಂಡಿನ ಸದ್ದಿನಲಿ
ಶತ್ರು ನಾಶದ ಗುಂಗಿನಲಿ
ಘರ್ಜಿಸುವ ನೀನೆ ನಿಜವಾದ ಗಂಡುಗಲಿ॥

ಸಾರಥಿಯೇ ಇಲ್ಲದ ಪಾರ್ಥ
ಅವಳಿಗೆ ನಿನ್ನ ಸೇವೆಯು ನಿಸ್ವಾರ್ಥ
ನಿನ್ನ ಬದುಕಿಗಿದೆ ಸಾವಿರ ಅರ್ಥ
ನಿನ್ನ ಗೌರವಿಸದಿರೆ ನಾವು ಸಾವಿಗೂ ಅಸಮರ್ಥ॥

ನಿನ್ನ ಹೆಸರು ಕೇಳಿದರೆ ಶತ್ರುವಿಗೆ ನಡುಕ
ನಿನ್ನೆದುರು ಸಿಕ್ಕರೆ ಅವನ ಜೀವನ ಕ್ಷಣಿಕ
ಸಾಹಸ ಗುಂಡಿಗೆಯಲಿ ನೀನೆ ಧನಿಕ
ನಿನ್ನ ನೆನೆಯಲು ಮನಸಲ್ಲಿ ಏನೋ ಪುಳಕ॥

ಭವ್ಯ ಭಾರತದ ಕನಸು ಹೊತ್ತು ಆ ದಿನ
ತಾಯಿ ಮುಡಿಪಿಟ್ಟಳು ಅವಳ  ಈ ಕಂದನ
ನಿನ್ನಿಂದಲೆ ಬೆಳಕು ಕಾಣುತ್ತಿದೆ ಹಲವು ಜೀವನ
ಸೈನಿಕನೆ ನಿನಗೀ  ನಾಗರಿಕನ ನಮನ॥
---
ಗುರುರಾಜ 

ಬುಧವಾರ, ಫೆಬ್ರವರಿ 13, 2013

ಒಂದು ಸಣ್ಣ ಕಥೆ -೬

ನನ್ನ ಮಗ ದೊಡ್ಡವನಾದ ಮೇಲೆ ಕಾರಿನೊಳಗೆ ಕೂಡಿಸಿ 
ಊರೆಲ್ಲ ಸುತ್ತಿಸುವನೆಂದು ಕನಸು ಕಾಣುತ್ತ ಫುಟ್ ಪಾತ್  ಬಳಿಯಲ್ಲಿ 
ಮಲಗಿದ್ದವನ ಮೇಲೆ ಕಾರು ಹರಿದು ಸಾವನ್ನಪ್ಪಿದ.
--
ಗುರುರಾಜ 

ಮಂಗಳವಾರ, ಫೆಬ್ರವರಿ 12, 2013

ಅಮ್ಮಾ !!!



ಎಲ್ಲೋ ಸುಮ್ಮನೆ ಮಲಗಿದ್ದ ನನ್ನ ಆತ್ಮ
ಜೋರಾಗಿ ಕೂಗಿ ಕರೆದನಾ ಬ್ರಹ್ಮ
ನಿನಾಗಾಗಿ ಕಾಯುತ್ತಿರುವಳು ನಿನ್ನ ಅಮ್ಮ
ಕೊಡಲು ನಿನಗೆ  ಮಾನುಷ ಜನ್ಮ ॥

ಅವನಾಜ್ಞೆಯಂತೆ ಬಿದ್ದೆ ಇವಳ ಮಡಿಲಿನಲಿ
ಎಂದಿಗೂ ಬತ್ತದ ವಾತ್ಸಲ್ಯದ ಕಡಲಿನಲಿ
ಹಾಲಾಮೃತವ ಉಣಿಸಿದಳು  ನಲಿವಿನಲಿ
ನನ್ನ ನೋಡುತ ಅವಳೆಲ್ಲ ನೋವನು ಮರೆಯುತಲಿ॥

ಚಂದಿರನ ತೋರಿಸಿ ತುತ್ತನು ಎಣಿಸುತ
ಬಾಯಿಗೆ ಇಟ್ಟಳು ಆನೆ ಬಾಯಿ ತೆರೆಸುತ
ಚೇಷ್ಟೆಗಳ ಮಾಡಿದರೆ ಕಿವಿಯನು ಹಿಂಡುತ
ಸುಮ್ಮನೆ ಹೆದರಿಸಿದಳು ಅಪ್ಪನ ಕರೆಯುತ॥

ಅಕ್ಷರಮಾಲೆಯ ತಲೆಗೇರಿಸಿದವಳು
ಸರಿ ತಪ್ಪೆಂಬ ವ್ಯತ್ಯಾಸವ ತಿಳಿಸಿದವಳು
ಬೇಕೆಂಬ ಹೊತ್ತಿಗೆ ಮೃಷ್ಟಾನ್ನವ ಬಡಿಸಿದವಳು
ನಾನೇ ಅವಳ ದೇವರೆಂಬಂತೆ ಬೆಳೆಸಿದವಳು॥

ಆ ಮಾತೆಯ ಋಣವ ನಾನೆಂದು ತೀರಿಸಲಾರೆ
ಅವಳ ಪ್ರೀತಿಯ ನಾನೆಂದು ಮೀರಿಸಲಾರೆ
ಮಾತೃ ಬಾಂಧವ್ಯದ ಚಕ್ರವ್ಯೂಹವನೆಂದು ಭೇದಿಸಲಾರೆ
ಅಮ್ಮಾ !! ನಿನಗಾಗಿ ಮುಡಿಪು ಈ ಸಣ್ಣ ಕಾವ್ಯಧಾರೆ॥
---
ಗುರುರಾಜ 

ಮಂಗಳವಾರ, ಫೆಬ್ರವರಿ 5, 2013

ಒಂದು ಸಣ್ಣ ಕಥೆ ೫

ದೇವರೇ ನೀನೆ ಗತಿ ಎಂದು ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿದ್ದ
ಪೂಜಾರಪ್ಪ ರಾಮಶಾಸ್ತ್ರಿಯ  ಮಗಳು ಇಂದು ಯಾವುದೋ ಹುಡುಗನ ಜೊತೆ
ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾದಳಂತೆ..
---
ಗುರುರಾಜ

ಒಂದು ಸಣ್ಣ ಕಥೆ - ೪

ಕೆಲಸ ಸಿಗದ ಬೇಸರದಲ್ಲಿ ಒಬ್ಬನೇ ಪಾರ್ಕಿನಲ್ಲಿ ಕುಳಿತ್ತಿದ್ದಾಗ
ಭಿಕ್ಷುಕನೊಬ್ಬ ಬಂದು "ಅಣ್ಣ ಏನಾದ್ರು ಇದ್ರೆ.....ಕೊಡಣ್ಣ " ಎನ್ನಲು
ಆ ವಿಧಿಯೇ ನನ್ನನ್ನು ಕುಹುಕ ಮಾಡಿದಂತೆ ಆಭಾಸವಾಯಿತು...
--
ಗುರುರಾಜ 

ಶನಿವಾರ, ಜನವರಿ 26, 2013

ಮುದುಡಿದ ಕನಸು



ಸಂಜೆಯ ಕಿರುಬೆರಳು ರಾತ್ರಿಯನು ತಾಕಲು
ರಾತ್ರಿಯು ಕೋಪದಿ ಬೆಳಕನು ಕರೆದಿರಲು
ಬೆಳಕು ಉತ್ಶಾಹದಿ ಚಿಮ್ಮುತ ಬರುತಿರಲು
ಬಂದೊಡನೆಯೇ ಕಣ್ಣ ರೆಪ್ಪೆಯ ಕೆಣಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ಮಾಘದ ಗಾಳಿಯು ಜೋರಾಗಿ ಬೀಸಲು
ಬೆಟ್ಟವು ಆಹ್ಲಾದದಿ ತಲೆಯ  ತೂಗಿರಲು
ಅರ್ಧ ತುಂಬಿದ ಮೋಡವು ತಾನಾಗಿ ಕುಲಕಲು
ಆ ಒಂದು ಹನಿಯು ಕಣ್ಣ ರೆಪ್ಪೆಯ  ತಾಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ತಾರೆಗಳೂರಿನ ಬಾನ ತೋಟವ ಕಾಯಲು
ರವಿಯ ನಂತರ ಚಂದಿರನ ಸರದಿ ಬಂದಿರಲು
ಸಾಗರವು ಸಂತಸದಿ ಅಲೆಗಳನು ತೂರಿರಲು
ಅಲೆಗಳದು ಬಂದು ಕಣ್ಣ ರೆಪ್ಪೆಯ ಸೋಕಿದಾಗ
ನಿನ್ನಯ ಕನಸದು ಅಲ್ಲಿಯೇ ಮುದುಡಿತು ।।

ಊರಿಗೆ ಹೋದವಳು ವಾಪಸ್ಸು ಬಂದಿರಲು
ನಿನ್ನಯ ಮೊಗದಲ್ಲಿ ನಾಚಿಕೆಯು ತುಂಬಿರಲು
ಕಾಲಲ್ಲಿ ನೀನಂದು ರಂಗೋಲಿಯ ಬಿಡುತಿರಲು
ಕಾಲ್ಬೆರಳ ಸಂಧಿಯಲಿ ಕಾಲುಂಗುರ ಕಂಡಾಗ
ನಿನ್ನಯ ಕನಸದು ಅಲ್ಲಿಯೇ ಅಸುನೀಗಿತು ।।
--ಗುರುರಾಜ 

ಮಂಗಳವಾರ, ಡಿಸೆಂಬರ್ 18, 2012

ಸಾಫ್ಟ್ ವೇರ್ ಸುಂದರಿ


ವಾರಾಂತ್ಯವೆಂಬ ಮಾಯೆಯು ಕಳೆದು ಸೋಮವಾರ ಬಂದಿತು
ಮತ್ತದೇ ಕೆಲಸಕೆ ಹೋಗುವ ಸಮಯವೂ ಆಯಿತು 
ಕಚೇರಿಗೆ ತೆರಳಲು ಕಾಯುತ ಬಸ್ ನಿಲ್ದಾಣದಲಿ 
ಧೂಳು ಕುಡಿಯುತ ನಿಂತೆ ಆ ಸುಡು ಬಿಸಿಲಿನಲಿ।।

ತೆವಳುತ ಬಳುಕುತ ಕೊನಗೂ ಬಂತು ಅಲ್ಲಿಗೆ
ಕಪ್ಪು ರಸ್ತೆಯ ಮೇಲೆ ವೋಲ್ವೋ ಎಂಬ ಕೆಂಪು ಮಲ್ಲಿಗೆ
ಹತ್ತಲು ತಂಪು ಗಾಳಿಯ ಆಹ್ವಾನ
ಅಲ್ಲೇ ಬರೆದಿತ್ತು  ಸುಖಕರವಾಗಿರಲಿ ನಿಮ್ಮ ಪ್ರಯಾಣ।।

ಹಾಗೆ ಕುಳಿತು ಅತ್ತಿತ್ತ  ಕಣ್ಣಾಡಿಸಲು ಕಂಡಲೊಬ್ಬಳು ಸುಂದರಿ
ಆ ಮೇನಕೆಯ ಭೂಲೋಕದ ಸೋದರಿ
ಅರ್ಧ ಮುಖವ ಮುಚ್ಚಿದ ಕನ್ನಡಕದ ಗಾಜು
ಇನ್ನರ್ಧ ಮುಖವ ಮುಚ್ಚಲು ಆ ಮುಂಗುರುಳ ಮೋಜು।।

ತುಟಿಯಂತು ಹಸಿ ರಕ್ತದ ಬಣ್ಣ
ಹುಬ್ಬೋ ಬೆಂಕಿ ಕಡ್ಡಿಗಿಂತಲೂ  ಸಣ್ಣ
ಏನೆಂದು ವರ್ಣಿಸಲಿ ಅವಳ ಆ  ವದನ
ಅಲಂಕಾರ ಮತ್ತು ಯವ್ವನದ ನಡುವಿನ  ಕದನ।।

ಕೈಯಲ್ಲಿ ಹಿಡಿದು ಗಣಕದ ತುಂಡು
ಕಿವಿಯನು  ಮುಚ್ಚಿದ ತಾಂತ್ರಿಕತೆಯ ಚೆಂಡು
ಅವಳಿಗೂ ಕೇಳಿಸದ ಸದ್ದಿನಲ್ಲಿ ಪಿಸು ಪಿಸು ಮಾತು
ಅದೆಷ್ಟು ಚುರುಕೋ ಆ ನಲ್ಲನ ಕಿವಿಯ ತೂತು।।

ಕೈ ಮುಗಿಯುತ ಅವಳ ಆ ಅವತಾರಕೆ
ಬೇಡುತ ದೇವರಲಿ ಅವಳ ನಲ್ಲನ ಜೀವನಕೆ
ಮುಗಿಸಿದೆ ನನ್ನ ಅಂದಿನ ಪ್ರಯಾಣ
ಮುಗಿಸುತ ಸಾಫ್ಟ್ ವೇರ್ ಸುಂದರಿಯ ಪುರಾಣ।।

--ಗುರುರಾಜ 

ಶನಿವಾರ, ಡಿಸೆಂಬರ್ 15, 2012

ಹೇಗಿದ್ದೀರ ನಮಸ್ಕಾರ

ಹೀಗೆಯೇ ಮೊನ್ನೆ ಸ್ನೇಹಿತನ ಮದುವೆ
ಹಲವು ದಿನಗಳ ನಂತರ ಸ್ನೇಹಿತರ ನಡುವೆ 
ಕಳೆದೆನು ಕಾಲವ ಕ್ಷಣಗಳ ಪೋಣಿಸುತ 
ಬಿರುಸಿನ ಬದುಕಲಿ ಮನವನು ತಣಿಸುತ ।।

ಮರೆಯದಾ  ಮುಖಗಳು ಒಂದೊಂದೇ ಎದುರಿರಲು 
ಹೃದಯದಾ  ಮನೆಯಲಿ ನೂರೆಂಟು ಮಾತಿರಲು 
ನಾಲಿಗೆಗೆ ಮಾತ್ರ ಹುಸಿ ಅಹಂಕಾರ 
ಅವರನು  ಕಂಡಾಗ  ಹೊರಟ ಎರಡೇ  ಮಾತು "ಹೇಗಿದ್ದೀರ ನಮಸ್ಕಾರ"।।

ಮೂಲೆಯಲಿ ನಿಂತು ಗಮನಿಸಿದೆ ಎಲ್ಲರನು 
ಎಲ್ಲರ ಮೊಗದಲ್ಲಿನ ನೂರು ವ್ಯತ್ಯಾಸವನು
ಹೆಗಲೇರಿದೆ ಅದು ಎಷ್ಟೋ ಜವಾಬ್ದಾರಿ
ಪಯಣ ಸಾಗಿದೆ ಬದಲಾವಣೆಯ ಬೆನ್ನೇರಿ ।।

ಅವನಪ್ಪಣೆಯಂತೆ  ಸಾಗಿಹುದು ಜೀವನ
ಅವನ ಇಚ್ಛೆಯಂತೆ  ಬಂದಿಹುದು ಈ ದಿನ
ಮಗ್ನರಾಗಿಹರು ಎಲ್ಲರೂ ತಮ್ಮದೇ ಸಾಧನೆಯಲಿ
ಅವನಲಿ ಬೇಡಿಕೆ ಇಷ್ಟೇ  ಹೀಗೊಮ್ಮೆ ಸ್ನೇಹಿತರ ಸಮ್ಮಿಲನವಾಗುತಿರಲಿ।।

--ಗುರುರಾಜ